ADVERTISEMENT

‘ತುಳುವಿಗೆ ಅಧಿಕೃತ ರಾಜ್ಯ ಭಾಷೆ ಮನ್ನಣೆ–ವಿಚಾರಗೋಷ್ಠಿ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 19:31 IST
Last Updated 5 ಮಾರ್ಚ್ 2021, 19:31 IST

ಬೆಂಗಳೂರು: ‘ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು ಹೇಗೆ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಇದೇ 7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018, 2019 ಹಾಗೂ 2020ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭದ ವೇಳೆಯೇ ಗೋಷ್ಠಿ ಜರುಗಲಿದೆ’ ಎಂದು ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್‌ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆವರೆಗೆ ಸಮಾರಂಭ ಆಯೋಜಿಸಲಾಗಿದೆ. ಸಂಜೆ 4ರಿಂದ 6ರವರೆಗೆ ಗೌರವ ಪ್ರಶಸ್ತಿ ಪ್ರದಾನ ನಡೆಯಲಿದೆ. ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೊರೊನಾ ಹಾಗೂ ಇನ್ನಿತರ ಕಾರಣಗಳಿಂದಾಗಿ ಹಿಂದಿನ ಮೂರು ವರ್ಷ ಪ್ರಶಸ್ತಿ ‍ಪ್ರದಾನ ಸಮಾರಂಭ ನಡೆದಿರಲಿಲ್ಲ. ಈ ಬಾರಿ ಒಂದೇ ವೇದಿಕೆಯಲ್ಲಿ ಎಲ್ಲರನ್ನೂ ಸತ್ಕರಿಸಲು ತೀರ್ಮಾನಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT