ADVERTISEMENT

ಹಳೆ ಕಲ್ಲಿಗೆ ಹೊಸ ಬಿಲ್ ಮರ್ಮ ಬಲ್ಲಿರೇನು?

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 20:09 IST
Last Updated 24 ನವೆಂಬರ್ 2018, 20:09 IST
   

ಬೆಂಗಳೂರು: ಯಾವ ಕಾಮಗಾರಿಯಲ್ಲಿ ಪಾಲುಹೆಚ್ಚು ಸಿಗುತ್ತದೆ? ಯಾವುದರಲ್ಲಿ ಇಡಿಗೆ ಇಡೀ ನುಂಗಿದರೂ ಯಾರಿಗೂ ಗೊತ್ತೇ ಆಗುವುದಿಲ್ಲ? ಯಾವ ರೀತಿ ಅಕ್ರಮ ನಡೆಸಿದರೆ ಸಿಕ್ಕಿಬೀಳುವ ಅಪಾಯ ಕಡಿಮೆ?

ಕೋಟಿ ಗಟ್ಟಲೆ ಬಂಡವಾಳ ಹೂಡಿ ಹುದ್ದೆ ಗಿಟ್ಟಿಸಿಕೊಳ್ಳುವ ಎಂಜಿನಿಯರ್‌ಗಳು ಇಂತಹ ವಿಚಾರಗಳಲ್ಲಿ ಬಲು ಚಾಣಾಕ್ಷರು. ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವ ಬಗ್ಗೆ ಅವರು ಚಿಂತೆ ಮಾಡುತ್ತಾರೋ ಇಲ್ಲವೋ, ಆದರೆ, ‘ತಾವು ಎಣಿಸಿದಷ್ಟನ್ನು ಬಾಚಿಕೊಳ್ಳಲು’ ಏನೆಲ್ಲ ಕಸರತ್ತು ಮಾಡಬೇಕು ಎಂಬ ಕಲೆ ಇವರಿಗೆ ಕರತಲಾಮಲಕ.

ಹುದ್ದೆಗಾಗಿ ಹೂಡಿದ ಬಂಡವಾಳದ ನೂರಾರು ಪಟ್ಟು ವಸೂಲಿ ಮಾಡುವುದು ಇವರಿಗೆ ‘ಸುಲಿದ ಬಾಳೆ ಹಣ್ಣು ಮೆಲ್ಲುವಷ್ಟೇ ಸಲೀಸು. ಹೊಟ್ಟೆ ಬಿರಿವಷ್ಟು ತಿಂದರೂ ಇವರ ಹಸಿವು ತಣಿಯುವುದಿಲ್ಲ. ‘ಊಟ ಮಾಡಿಯೇ ಇಲ್ಲವೇನೋ ಎಂಬಂತೆ ಬಾಳೆ ಎಲೆಯನ್ನು ಸಾಪಾಟಾಗಿ ಸ್ವಚ್ಛಗೊಳಿಸುವ ಅವರ ‘ಕುಶಾಗ್ರಮತಿ’ಯ ಭೋಜನಕಲೆ ಎಂಥಹವರನ್ನೂ ದಂಗುಬಡಿಸುತ್ತದೆ.

ADVERTISEMENT

ಮೂಲದಲ್ಲೇ ಮೋಸ: ‘ಒಂದು ಕಾಮಗಾರಿಗೆ ಅಂದಾಜುಪಟ್ಟಿ ತಯಾರಿಸುವಾಗಲೇ ‘ಬಾಚುವ ಕೆಲಸವೂ ಆರಂಭವಾಗಿರುತ್ತದೆ. ಕಾಮಗಾರಿಯ ಒಟ್ಟು ವೆಚ್ಚದ ಜೊತೆಯೇ ಭಕ್ಷೀಸಿನ ಪ್ರಮಾಣವೂ ಸೇರಿಕೊಳ್ಳುತ್ತದೆ. ಯಾವ ಗುತ್ತಿಗೆದಾರ ಅಷ್ಟು ಪಾಲನ್ನು ನೀಡಲು ಸಿದ್ಧರಿರುತ್ತಾರೋ ಅವರೊಂದಿಗೆ ವ್ಯವಹಾರ ಕುದುರುತ್ತದೆ. ಅವರಿಗೇ ಗುತ್ತಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ’ ಎಂದು ವಿವರಿಸುತ್ತಾರೆ ಒಳವ್ಯವಹಾರಗಳ ಗುಟ್ಟುಬಲ್ಲ ಗುತ್ತಿಗೆದಾರರೊಬ್ಬರು.

ಕಾಮಗಾರಿ ಗುತ್ತಿಗೆ ನೀಡುವಲ್ಲಿ ಮುಚ್ಚುಮರೆಗೆ ಅವಕಾಶ ಇರಬಾರದು ಎಂಬ ಕಾರಣಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ಜಾರಿಯಲ್ಲಿದೆ. ಟೆಂಡರ್‌ ಕರೆದೇ ಕಾಮಗಾರಿಯ ಗುತ್ತಿಗೆ ನೀಡಬೇಕು.₹ 5 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗೆ ಸಂಪುಟದ ಒಪ್ಪಿಗೆ ಪಡೆಯಬೇಕು, ₹ 2ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗೆ ಇ–ಟೆಂಡರ್‌ ಕರೆಯಬೇಕು. ದೊಡ್ಡ ಮೊತ್ತದ ಕಾಮಗಾರಿಗೆ ಗ್ಲೋಬಲ್‌ ಟೆಂಡರ್‌ ಕರೆಯಬೇಕು ಎಂಬ ಹತ್ತು ಹಲವು ನಿಯಮಗಳಿರುವಾಗ ಎಂಜಿನಿಯರ್‌ ತನಗೆ ಬೇಕಾದ ಗುತ್ತಿಗೆದಾರನಿಗೇ ಕಾಮಗಾರಿ ಸಿಗುವಂತೆ ನೋಡಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ, ಅಲ್ಲೇ ಇರುವುದು ಕರಾಮತ್ತು. ನಿಯಮಗಳೆಂಬ ರಂಗೋಲಿ ಜಾಲದ ಕೆಳಗೆ ನುಸುಳುವ ಕಲೆ ಇವರಿಗೆ ನೀರು ಕುಡಿದಷ್ಟೇ ಸಲೀಸು.

ನಿಯಮಗಳೆಷ್ಟೇ ಜಟಿಲವಾಗಿದ್ದರೂ ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪಳಗಿಸುವ ಕೌಶಲ ಇವರಿಗೆ ಚೆನ್ನಾಗಿಯೇ ಗೊತ್ತು. ಉದಾಹರಣೆಗೆ, ಸುವರ್ಣ ಸೌಧ ನಿರ್ಮಾಣಕ್ಕೆ ಟೆಂಡರ್‌ ಕರೆಯಬೇಕಿದೆ ಎಂದಿಟ್ಟುಕೊಳ್ಳಿ. ಈ ಹಿಂದೆ ಇಂತಹದ್ದೇ ಕಟ್ಟಡವನ್ನು ಕಟ್ಟಿದವರು ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಬಹುದು ಎಂದು ಒಂದು ಸಾಲಿನ ಒಂದು ಷರತ್ತು ಸೇರಿಸಿದರಾಯಿತು. ವಿಧಾನ ಸೌಧ ಕಟ್ಟಡ ಕಟ್ಟುವಾಗ ಇದ್ದ ಗುತ್ತಿಗೆದಾರರು ಬದುಕಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಕಾಮಗಾರಿಯ ಗುತ್ತಿಗೆ ಅವರಿಗೆ ಬೇಕಾದ, ‘ವಿಕಾಸ ಸೌಧ’ ಕಟ್ಟಿಸಿದ ಗುತ್ತಿಗೆದಾರನಿಗೇ ಸಿಕ್ಕೇ ಸಿಗುತ್ತದೆ.

‘ಟೆಂಡರ್‌ ಕರೆಯುವುದೆಲ್ಲ ಕೇವಲ ಕಣ್ಣಾಮುಚ್ಚಾಲೆ. ಟೆಂಡರ್‌ ಯಾರಿಗೆ ಸಿಗಬೇಕು ಎಂಬುದನ್ನು ಮೊದಲೇ ನಿರ್ಧರಿಸಿರುತ್ತಾರೆ. ತಮಗೆ ಬೇಕಾದ ಗುತ್ತಿಗೆದಾರನಿಗೆ ಅನುಕೂಲವಾಗುವಂತೆಹ ಷರತ್ತುಗಳನ್ನು ಹಾಕುವುದರಿಂದ ಅನ್ಯ ಗುತ್ತಿಗೆದಾರರು ಆ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದೇ ಇಲ್ಲ. ಒಂದು ವೇಳೆ ಭಾಗವಹಿಸಿದರೂ ತಾಂತ್ರಿಕ ಬಿಡ್‌ ಸಲ್ಲಿಕೆ ಬಳಿಕ ಏನಾದರೂ ಒಂದು ಖ್ಯಾತೆ ತೆಗೆದು ಅವರನ್ನು ಅನರ್ಹಗೊಳಿಸುತ್ತಾರೆ. ಎಲ್ಲವನ್ನು ಸಮರ್ಥವಾಗಿ ಎದುರಿಸಿ ಟೆಂಡರ್‌ ಪಡೆದರೂ ಬಿಲ್‌ ಪಾವತಿ ಸಂದರ್ಭದಲ್ಲಿ ರಗಳೆ ಮಾಡುತ್ತಾರೆ. ಈ ಕಾರಣಕ್ಕೆ ಹೆದರಿ ಯಾರೂ ಟೆಂಡರ್‌ಗೆ ಅರ್ಜಿ ಸಲ್ಲಿಸುವ ತಂಟೆಗೇ ಹೋಗುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಗುತ್ತಿಗೆದಾರರೊಬ್ಬರು ಒಳ ಮರ್ಮ ವಿವರಿಸಿದರು.

ಒಂದೇ ಕಾಮಗಾರಿ– ಬಿಲ್‌ ಹಲವು ಬಾರಿ: ಒಂದು ಕಾಮಗಾರಿಗೆ ಬೇರೆ ಬೇರೆ ಹೆಸರಿನಲ್ಲಿ ಬಿಲ್‌ ಮಾಡಿಸುವುದು ಹುದ್ದೆಗಾಗಿ ಹೂಡಿದ ಬಂಡವಾಳ ವಾಪಸಾತಿಯ ಸುಲಭ ವಿಧಾನ. ರಸ್ತೆಗೆ ಡಾಂಬರೀಕರಣ ಮಾಡಿದರೆ ಅದು ಆರಂಭವಾಗುವ ಹಾಗೂ ಅಂತ್ಯವಾಗುವ ಸ್ಥಳದ ಹೆಸರನ್ನು ಬದಲು ಮಾಡಿದರೆ ಪಕ್ಕ ಯಾರಿಗೂ ಸಂದೇಹ ಬರುವುದಿಲ್ಲ.ಚರಂಡಿ, ಮೋರಿ ಕಾಮಗಾರಿ ನಡೆದಿರುವುದು ಎಲ್ಲೋ, ಅದರ ಫೋಟೊ ತೋರಿಸಿ ಹಲವು ಬಾರಿ ಬಿಲ್‌ ಮಾಡಲಾಗುತ್ತದೆ.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಎಸ್‌ಸಿಸಿಪಿ ಮತ್ತು ಟಿಎಸ್‌ಪಿ) ಪ್ರಕಾರ ಪ್ರತಿಯೊಂದು ಇಲಾಖೆಯು ಬಜೆಟ್‌ನ ಒಟ್ಟು ಯೋಜನಾ ವೆಚ್ಚದಲ್ಲಿ ಶೇ 24ರಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಖರ್ಚು ಮಾಡಲೇಬೇಕು. ಈ ಯೋಜನೆಯಡಿ ಯಾವುದೋ ಇಲಾಖೆ ನಡೆಸಿದ ಕಾಮಗಾರಿಗೆ ಬೇ ಬೇರೆ ಇಲಾಖೆಗಳಿಂದ ಬಿಲ್‌ ಪಾವತಿ ಮಾಡಿದ ಅನೇಕ ಉದಾಹರಣೆಗಳಿವೆ. ಪರಿಶಿಷ್ಟರ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣ ಎಂಜಿನಿಯರ್‌ಗಳ ಜೇಬು ಸೇರುತ್ತಿದೆ’ ಎಂದು ಲೋಕೋಪಯೋಗಿ ಇಲಾಖೆಯ ಒಳವ್ಯವಹಾರಗಳನ್ನು ಬಲ್ಲ ಅಧಿಕಾರಿ ಬೇಸರ ವ್ಯಕ್ತಪಡಿಸುತ್ತಾರೆ.

ಮಳೆ ಎಂಬ ಗುರಾಣಿ: ರಸ್ತೆಗಳು ಪದೇ ಪದೇ ಗುಂಡಿ ಬಿದ್ದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರವಾದರೆ ಎಂಜಿನಿಯರ್‌ಗಳಿಗೆ ಸುಗ್ಗಿ. ಗುಂಡಿ ಮುಚ್ಚಿದರೂ ಮಳೆ ಮತ್ತೆ ರಸ್ತೆಯನ್ನು ನುಂಗಿ ಹಾಕಿತು, ಗುಂಡಿ ಮುಚ್ಚಲು ಮಳೆ ಅವಕಾಶವನ್ನೇ ನೀಡಲಿಲ್ಲ ಎಂಬ ಸಬೂಬು ಸದಾ ಸಿದ್ಧ.

ಗುತ್ತಿಗೆದಾರರ ಜೊತೆ ಎಂಜಿಯರ್‌ಗಳ ಅಕ್ರಮ ಒಳಒಪ್ಪಂದ ಸರ್ಕಾರದ ಬೊಕ್ಕಸದ ಸಾವಿರಾರು ಕೋಟಿಯನ್ನು ಸದ್ದಿಲ್ಲದೇ ಕರಗಿಸುತ್ತಿದೆ. ವರ್ಗಾವಣೆ ಸಲುವಾಗಿ ಕೊಟ್ಟ ಹಣಕ್ಕೆ ಪ್ರತಿಯಾಗಿ ಇವರು ಅನೇಕ ’ಕಾಮಗಾರಿ’ಗಳನ್ನೇ ನುಂಗುತ್ತಾರೆ. ಪಾಲು ಹಂಚಿಕೆಗೆ ಸಂಬಂಧಿಸಿದ ತಕರಾರುಗಳಿಂದಾಗಿಯೇ ಅನೇಕ ಕಾಮಗಾರಿಗಳು ವಿಳಂಬವಾಗುತ್ತವೆ. ಕೆಲವು ಅರ್ಧಕ್ಕೆ ಸ್ಥಗಿತಗೊಳ್ಳುವುದೂ ಉಂಟು.

ನಿಯೋಜನೆಗೊಂಡವರ ಠಿಕಾಣಿ

ನಿಯೋಜನೆ ಮೇಲೆ ಬಿಡಿಎ, ಬಿಬಿಎಂಪಿ, ಕೆಐಎಡಿಬಿ, ಗೃಹ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಭಾರಿ ಬೇಡಿಕೆ. ಇಲ್ಲಿಗೆ ನಿಯೋಜನೆ ಮೇರೆಗೆ ಬರಲು ಬೇರೆ ಇಲಾಖೆಗಳ ಎಂಜಿನಿಯರ್‌ಗಳು ಎಷ್ಟು ದುಡ್ಡು ಬೇಕಾದರೂ ಕೊಡಲು ಸಿದ್ಧ. ಒಮ್ಮೆ ಇಲ್ಲಿಗೆ ನಿಯೋಜನೆಗೊಂಡವರು ಜಪ್ಪಯ್ಯ ಎಂದರೂ ಮಾತೃ ಇಲಾಖೆಗೆ ಮರಳಲು ಒಪ್ಪುವುದಿಲ್ಲ.

ಬಿಡಿಎನಲ್ಲಿ ಖಾಸಗಿ ಬಡಾವಣೆ ಯೋಜನೆಗಳಿಗೆ ಮಂಜೂರಾತಿ ನೀಡುವ ಹಾಗೂ ನಿವೇಶನಗಳ ಖಚಿತ ನಕ್ಷೆ (ಸಿ.ಡಿ) ನೀಡುವ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವುದಕ್ಕೇ ಬೇಡಿಕೆ ಹೆಚ್ಚು.ಈ ಕಾರ್ಯಗಳಿಗೆ ಪ್ರತಿ ಕಾರ್ಯಪಾಲಕ ಎಂಜಿನಿಯರ್‌ಗೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಸಹಾಯಕ ಅಥವಾ ಕಿರಿಯ ಎಂಜಿನಿಯರ್‌ಗೆ ಇಂತಿಷ್ಟು ಪಾಲು ನೀಡಲೇಬೇಕು. ಲಂಚ ನೀಡದೇ ಈ ಕೆಲಸಗಳು ಆಗುವುದಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮವನ್ನು ಉಲ್ಲಂಘಿಸದೆ ಕಟ್ಟಡ ನಿರ್ಮಿಸುವುದು ಕಷ್ಟ ಎಂಬುದು ಸ್ಫಟಿಕ ಸ್ಪಷ್ಟ. ನಕ್ಷೆ ಮಂಜೂರು ಮಾಡಿಸಿಕೊಳ್ಳುವುದರಿಂದ ಹಿಡಿದು ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವವರೆಗೆ ಎಂಜಿನಿಯರ್‌ಗಳ ಬಳಿ ಎಡತಾಕಲೇ ಬೇಕು. ಅವರು ಒಂದು ‘ಕೊಕ್ಕೆ’ ಹಾಕಿದರೂ ಅದನ್ನು ಸರಿಪಡಿಸಲು ಹತ್ತಾರು ಬಾರಿ ಕಚೇರಿಗೆ ಅಲೆದಾಡಬೇಕು. ಈ ಭಯಕ್ಕೆ ಅವರಿಗೆ ತಲುಪಿಸಬೇಕಾದ ‘ಪ್ರಸಾದ’ದ ಬಗ್ಗೆ ಯಾರೂ ತಕರಾರು ತೆಗೆಯುವುದಿಲ್ಲ.

ರಾಜಧಾನಿಯಲ್ಲಿ ನೂರಾರು ಕೋಟಿ ಬಾಳುವ ಒಂದಲ್ಲ ಒಂದು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಲೇ ಇರುತ್ತದೆ. ಇವುಗಳಲ್ಲಿ ಸಿಗುವ ‘ಮಾಮೂಲಿ’ಗೇನೂ ಕೊರತೆ ಇಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವೆ ವ್ಯವಹಾರ ಕೂಡಿಸುವ ದಲ್ಲಾಳಿಗಳ ಜಾಲವೇ ಇಲ್ಲಿದೆ. ಮೇಯುವುದಕ್ಕೆ ಹೇರಳ ಅವಕಾಶ ಇರುವುದರಿಂದಲೇ ಇಲ್ಲಿಗೆ ವರ್ಗವಾಗಿ ಬರಲು ಎಂಜಿನಿಯರ್‌ಗಳು ಸಾಲುಗಟ್ಟಿ ನಿಲ್ಲುತ್ತಾರೆ. ಇಲ್ಲಿಗೆ ವರ್ಗ ಮಾಡಿಸಿಕೊಳ್ಳಲು ಕೇಳಿದಷ್ಟು ಕೊಡಲೂ ಸಿದ್ಧರಿರುತ್ತಾರೆ.

ನವೀಕರಣ, ದುರಸ್ತಿ– ಪಾಲು ಜಾಸ್ತಿ

ಅಣೆಕಟ್ಟು, ರಸ್ತೆ ಮೂಲಸೌಕರ್ಯ ಅಭಿವೃದ್ಧಿಯಂತಹ ಭಾರಿ ಯೊಜನೆಗಳಲ್ಲಿ ಹೆಚ್ಚು ಅವ್ಯವಹಾರ ನಡೆಯುತ್ತದೆ ಎಂಬ ಗ್ರಹಿಕೆ ಜನರಲ್ಲಿದೆ. ಆದರೆ, ಅತಿ ಹೆಚ್ಚು ಬಾಚಿಕೊಳ್ಳಲು ಅವಕಾಶ ಇರುವುದು ಕಟ್ಟಡ ನವೀಕರಣ, ದುರಸ್ತಿ ಕಾಮಗಾರಿಗಳಲ್ಲಿ.

ನವೀಕರಣದ ಹೆಸರಿನಲ್ಲಿ ಸರ್ಕಾರಿ ಕಚೇರಿಗಳ, ಸಚಿವರ ನಿವಾಸಗಳ ಎಲೆಕ್ಟ್ರಿಕ್‌ ಉಪಕರಣಗಳನ್ನು ಪೀಠೋಪಕರಣಗಳನ್ನು ಪದೇ ಪದೇ ಬದಲಿಸುವುದು ಯಾವತ್ತೂ ನಡೆಯುವ ಕೆಲಸಗಳು. ಹಳೆಯ ಪೀಠೋಪಕರಣಗಳು ಎಲ್ಲಿಗೆ ಹೋಗುತ್ತವೆ ಎಂಬುದು ಮಾತ್ರ ಯಕ್ಷ ಪ್ರಶ್ನೆ.

‘ಒಬ್ಬರ ಕಚೇರಿಯಿಂದ ಕಳಚಲಾದ ಬಲ್ಬ್‌ ಇನ್ನೊಬ್ಬರ ಕಚೇರಿಯನ್ನು ಬೆಳಗುತ್ತದೆ. ಹಳೆ ಪೀಠೋಪಕರಣ ಪಾಲಿಷ್‌ ಆಗಿ ಮತ್ತೊಂದು ಕಡೆ ನೆಲೆಗೊಳ್ಳುತ್ತದೆ. ಈ ನಡುವೆ ‘ಹೊಸ’ ಹೆಸರಿನಲ್ಲಿ ಬಿಲ್‌ಗಳು ಸೃಷ್ಟಿಯಾಗುತ್ತವೆ. ಹಾಗಾಗಿ ಇಂತಹ ಕಾರ್ಯಗಳ ಗುತ್ತಿಗೆಗಾಗಿ ಗುತ್ತಿಗೆದಾರರು ಸಕ್ಕರೆಗೆ ಇರುವೆ ಮುತ್ತುವಂತೆ ಮುತ್ತುತ್ತಾರೆ. ತಮ್ಮತ್ತ ಕೃಪಾಕಟಾಕ್ಷ ತೋರುವ ಎಂಜಿನಿಯರ್‌ಗಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಕ್ರಮ ನಡೆಸುವವರಿಗಷ್ಟೇ ಇಲ್ಲಿ ಜಾಗ’ ಎನ್ನುತ್ತಾರೆಗುತ್ತಿಗೆದಾರರೊಬ್ಬರು.

ಕಟ್ಟಡಗಳನ್ನು ದುರಸ್ತಿ ಪಡಿಸದೆಯೇ ಪದೇ ಪದೇ ಬಿಲ್‌ ಪಾವತಿ ಮಾಡಿಸಿಕೊಂಡ ಪ್ರಕರಣಗಳು ಹೊರಗೆ ಬರುವುದು ಕಡಿಮೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆ ಕೇಳಿದರೂ ಸಿಗುವುದಿಲ್ಲ. ಏನಾದರೂ ಒಂದು ನೆಪ ಹೇಳಿ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ. ಕೆಲವು ಪ್ರಮುಖ ಕಟ್ಟಡಗಳ ದುರಸ್ತಿಗೆ ಹತ್ತು ವರ್ಷಗಳಲ್ಲಿ ಬಳಸಿದ ಹಣವನ್ನು ಲೆಕ್ಕ ಹಾಕಿದರೆ, ಅದರಲ್ಲಿ ಹೊಸ ಕಟ್ಟಡವನ್ನೇ ಕಟ್ಟಬಹುದಿತ್ತೋ ಎಂದೆನಿಸದಿರದು.

ಇಂತಹ ಕಾಮಗಾರಿಗಳಲ್ಲಿ ಅನುದಾನ ಬಿಡುಗಡೆ ಹಂತದಲ್ಲಿ ಒಟ್ಟು ಮೊತ್ತದ ಶೇ 10ರಷ್ಟು ಲಂಚ ಮುಖ್ಯ ಎಂಜಿನಿಯರ್‌ ಹಾಗೂ ಇಲಾಖೆ ಕಾರ್ಯದರ್ಶಿ ಕೈಸೇರುತ್ತದೆ ಎಂದು ಆರೋಪಿಸುತ್ತಾರೆ ಕೆಲವು ಗುತ್ತಿಗೆದಾರರು.

ಕಾರ್ಯಾದೇಶ ಆಗುವ ಹಂತ ಹಾಗೂ ಬಿಲ್‌ ಪಾವತಿ ವೇಳೆ ತಳಹಂತದ ಎಂಜಿನಿಯರ್‌ಗಳಿಗೆ ಮತ್ತೆ ಲಂಚ ನೀಡಬೇಕಾ
ಗುತ್ತದೆ ಎಂದು ಅವರು ಆರೋಪ ಮಾಡಿದರು.

ನಿಯೋಜನೆಗೊಂಡವರ ಠಿಕಾಣಿ

ನಿಯೋಜನೆ ಮೇಲೆ ಬಿಡಿಎ, ಬಿಬಿಎಂಪಿ, ಕೆಐಎಡಿಬಿ, ಗೃಹ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಭಾರಿ ಬೇಡಿಕೆ. ಇಲ್ಲಿಗೆ ನಿಯೋಜನೆ ಮೇರೆಗೆ ಬರಲು ಬೇರೆ ಇಲಾಖೆಗಳ ಎಂಜಿನಿಯರ್‌ಗಳು ಎಷ್ಟು ದುಡ್ಡು ಬೇಕಾದರೂ ಕೊಡಲು ಸಿದ್ಧ. ಒಮ್ಮೆ ಇಲ್ಲಿಗೆ ನಿಯೋಜನೆಗೊಂಡವರು ಜಪ್ಪಯ್ಯ ಎಂದರೂ ಮಾತೃ ಇಲಾಖೆಗೆ ಮರಳಲು ಒಪ್ಪುವುದಿಲ್ಲ.

ಬಿಡಿಎನಲ್ಲಿ ಖಾಸಗಿ ಬಡಾವಣೆ ಯೋಜನೆಗಳಿಗೆ ಮಂಜೂರಾತಿ ನೀಡುವ ಹಾಗೂ ನಿವೇಶನಗಳ ಖಚಿತ ನಕ್ಷೆ (ಸಿ.ಡಿ) ನೀಡುವ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವುದಕ್ಕೇ ಬೇಡಿಕೆ ಹೆಚ್ಚು.ಈ ಕಾರ್ಯಗಳಿಗೆ ಪ್ರತಿ ಕಾರ್ಯಪಾಲಕ ಎಂಜಿನಿಯರ್‌ಗೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಸಹಾಯಕ ಅಥವಾ ಕಿರಿಯ ಎಂಜಿನಿಯರ್‌ಗೆ ಇಂತಿಷ್ಟು ಪಾಲು ನೀಡಲೇಬೇಕು. ಲಂಚ ನೀಡದೇ ಈ ಕೆಲಸಗಳು ಆಗುವುದಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮವನ್ನು ಉಲ್ಲಂಘಿಸದೆ ಕಟ್ಟಡ ನಿರ್ಮಿಸುವುದು ಕಷ್ಟ ಎಂಬುದು ಸ್ಫಟಿಕ ಸ್ಪಷ್ಟ. ನಕ್ಷೆ ಮಂಜೂರು ಮಾಡಿಸಿಕೊಳ್ಳುವುದರಿಂದ ಹಿಡಿದು ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವವರೆಗೆ ಎಂಜಿನಿಯರ್‌ಗಳ ಬಳಿ ಎಡತಾಕಲೇ ಬೇಕು. ಅವರು ಒಂದು ‘ಕೊಕ್ಕೆ’ ಹಾಕಿದರೂ ಅದನ್ನು ಸರಿಪಡಿಸಲು ಹತ್ತಾರು ಬಾರಿ ಕಚೇರಿಗೆ ಅಲೆದಾಡಬೇಕು. ಈ ಭಯಕ್ಕೆ ಅವರಿಗೆ ತಲುಪಿಸಬೇಕಾದ ‘ಪ್ರಸಾದ’ದ ಬಗ್ಗೆ ಯಾರೂ ತಕರಾರು ತೆಗೆಯುವುದಿಲ್ಲ.

ರಾಜಧಾನಿಯಲ್ಲಿ ನೂರಾರು ಕೋಟಿ ಬಾಳುವ ಒಂದಲ್ಲ ಒಂದು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಲೇ ಇರುತ್ತದೆ. ಇವುಗಳಲ್ಲಿ ಸಿಗುವ ‘ಮಾಮೂಲಿ’ಗೇನೂ ಕೊರತೆ ಇಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವೆ ವ್ಯವಹಾರ ಕೂಡಿಸುವ ದಲ್ಲಾಳಿಗಳ ಜಾಲವೇ ಇಲ್ಲಿದೆ. ಮೇಯುವುದಕ್ಕೆ ಹೇರಳ ಅವಕಾಶ ಇರುವುದರಿಂದಲೇ ಇಲ್ಲಿಗೆ ವರ್ಗವಾಗಿ ಬರಲು ಎಂಜಿನಿಯರ್‌ಗಳು ಸಾಲುಗಟ್ಟಿ ನಿಲ್ಲುತ್ತಾರೆ. ಇಲ್ಲಿಗೆ ವರ್ಗ ಮಾಡಿಸಿಕೊಳ್ಳಲು ಕೇಳಿದಷ್ಟು ಕೊಡಲೂ ಸಿದ್ಧರಿರುತ್ತಾರೆ.

ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಹೊಸ ವರಸೆ

’ಬೇನಾಮಿ ಹೆಸರಿನಲ್ಲಿ ಎಂಜಿನಿಯರ್‌ಗಳೇ ಕಾಮಗಾರಿಯ ಗುತ್ತಿಗೆ ಪಡೆಯುತ್ತಿರುವುದು ಹೊಸ ಬೆಳವಣಿಗೆ. ಬೇನಾಮಿ ಹೆಸರಿನಲ್ಲಿ ಗುತ್ತಿಗೆ ನಡೆಸುವ ಜನಪ್ರತಿನಿಧಿಗಳ ಜೊತೆಗೂ ಕೆಲವರು ಕೈಜೋಡಿಸುತ್ತಿದ್ದಾರೆ. ಇದಂತೂ ಇನ್ನೂ ಅಪಾಯಕಾರಿ ಬೆಳವಣಿಗೆ. ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಭಾರಿ ಯೋಜನೆ– ಉನ್ನತ ಮಟ್ಟದಲ್ಲೇ ಹಂಚಿಕೆ

‘ಹೆದ್ದಾರಿ ಅಭಿವೃದ್ಧಿ, ಅಣೆಕಟ್ಟೆ ನಿರ್ಮಾಣ, ಸೇತುವೆ ನಿರ್ಮಾಣ, ಎಕ್ಸ್‌ಪ್ರೆಸ್‌ ಕಾರಿಡಾರ್‌ಗಳ ನಿರ್ಮಾಣ ಮುಂತಾದ ಭಾರಿ ಮೂಲಸೌಕರ್ಯ ಯೋಜನೆಗಳಲ್ಲಿ ಉನ್ನತ ಹಂತದಲ್ಲೇ ಪಾಲುಹಂಚಿಕೆ ಆಗುತ್ತದೆ. ರಾಜಕಾರಣಿಗಳು, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಎಂಜಿನಿಯರ್‌ಗಳು ಇದರ ಪ್ರಮುಖ ಫಲಾನುಭವಿಗಳು. ತಳಮಟ್ಟದ ಎಂಜಿನಿಯರ್‌ಗಳಿಗೆ ಇದರಲ್ಲಿ ಕಿಂಚಿತ್‌ ಪಾಲು ಸಿಕ್ಕರೇ ಅದೇ ಪಂಚಾಮೃತ. ಒಂದು ಯೋಜನೆ ಅಂತಿಮಗೊಳ್ಳುವಾಗಲೇ ಯಾರಿಗೆಷ್ಟು ಪಾಲು ಎಂಬುದೂ ನಿರ್ಧಾರವಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈಕಾರಣದಿಂದಾಗಿಯೇ ಮೂಲಸೌಕರ್ಯ ಅಭಿವೃದ್ಧಿ ಭಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಗಮಗಳ ಆಯಕಟ್ಟಿನ ತಾಂತ್ರಿಕ ಹುದ್ದೆಗಳಿಗೂ ಭಾರಿ ಬೇಡಿಕೆ ಇರುತ್ತದೆ.

ಆಯಕಟ್ಟಿನ ಹುದ್ದೆಗಳು..

l ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ

l ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ

l ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ

l ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ

l ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ

l ವ್ಯವಸ್ಥಾಪಕ ನಿರ್ದೇಶಕರು, ವಿಶ್ವೇಶ್ವರಯ್ಯ ಜಲ ನಿಗಮ

l ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಭಾಗ್ಯ ಜಲನಿಗಮ

l ಮುಖ್ಯ ಎಂಜಿನಿಯರ್‌, ಸಂಪರ್ಕ ಮತ್ತು ಕಟ್ಟಡ, ದಕ್ಷಿಣ ವಲಯ, ಬೆಂಗಳೂರು

l ಮುಖ್ಯ ಎಂಜಿನಿಯರ್‌, ಸಂಪರ್ಕ ಮತ್ತು ಕಟ್ಟಡ, ಉತ್ತರ ವಲಯ ಧಾರವಾಡ

l ಮುಖ್ಯ ಎಂಜಿನಿಯರ್‌, ಸಂಪರ್ಕ ಮತ್ತು ಕಟ್ಟಡ, ಕಲಬುರ್ಗಿ

l ಮುಖ್ಯ ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ

l ಮುಖ್ಯ ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ)

l ಮುಖ್ಯ ಎಂಜಿನಿಯರ್‌, ಪೌರಾಡಳಿತ ನಿರ್ದೇಶನಾಲಯ

l ಮುಖ್ಯ ಯೋಜನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ

l ಎಂಜಿನಿಯರಿಂಗ್ ಸದಸ್ಯ, ಬಿಡಿಎ

l ಮುಖ್ಯ ಎಂಜಿನಿಯರ್‌, ಬಿಬಿಎಂಪಿ

l ವ್ಯವಸ್ಥಾಪಕ ನಿರ್ದೇಶಕ, ಕೆಆರ್‌ಡಿಸಿಎಲ್

l ಮುಖ್ಯ ಎಂಜಿನಿಯರ್‌, ಕೆಆರ್‌ಡಿಸಿಎಲ್

l ಮುಖ್ಯ ಯೋಜನಾಧಿಕಾರಿ, ಕೆಶಿಪ್‌

l ಯೋಜನಾ ನಿರ್ದೇಶಕ, ಕೆಶಿಪ್

l ಮುಖ್ಯ ಎಂಜಿನಿಯರ್‌, ಜಲ ಮಂಡಳಿ

l ಮುಖ್ಯ ಎಂಜಿನಿಯರ್‌, ಕೆಆರ್‌ಐಡಿಎಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.