ಬೆಂಗಳೂರು: ‘ದೇಶದಲ್ಲಿ ಒಂದಿ ಲ್ಲೊಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ವರ್ಷವೊಂದರಲ್ಲಿ 6 ತಿಂಗಳು ಆಡಳಿತಾತ್ಮಕ ಕೆಲಸ ಗಳು ನಡೆಯುವುದೇ ಇಲ್ಲ. ಒಂದು ದೇಶ, ಒಂದು ಚುನಾವಣೆಯೇ ಇದಕ್ಕೆ ಪರಿಹಾರ. ಇದನ್ನು ಎಲ್ಲರೂ ಬೆಂಬಲಿಸಬೇಕು. ಇದಕ್ಕಾಗಿ ಸಾರ್ವಜನಿಕರೇ ಅಭಿಯಾನ ನಡೆಸಬೇಕು’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಪಾದಿಸಿದರು.
‘ಒಂದು ದೇಶ, ಒಂದು ಚುನಾವಣೆ’ ಕುರಿತು ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಜತೆಗೆ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಸದಾ ಕಾಲ ಚುನಾವಣೆ ನಡೆಯುವುದ ರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದರ ಬಗ್ಗೆ ನನ್ನ ಅನುಭವವನ್ನೇ ನಿಮ್ಮ ಮುಂದೆ ಇರಿಸುತ್ತೇನೆ’ ಎಂದರು.
‘2023ರಲ್ಲಿ ನಾನು ಮಧ್ಯ ಪ್ರದೇಶದ ಮುಖ್ಯಮಂತ್ರಿ ಆಗಿದ್ದೆ. ಅದೇ ವರ್ಷದ ಸೆಪ್ಟೆಂಬರ್‌ನಿಂದಲೇ ಮಧ್ಯ ಪ್ರದೇಶ ವಿಧಾನಸಭೆಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದವು. ಆ 4 ತಿಂಗಳು ಯಾವುದೇ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಚುನಾವಣೆ ಮುಗಿದು, ಹೊಸ ಸರ್ಕಾರ ಬಂದ ಎರಡೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು’ ಎಂದರು.
‘ಲೋಕಸಭಾ ಚುನಾವಣೆ ಮುಗಿದು, ಮೋದಿ ಅವರು ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ನಾನೂ ಕೃಷಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ಸಚಿವಾಲಯದ ಕೆಲಸಗಳನ್ನು ಅರ್ಥ ಮಾಡಿಕೊಳ್ಳುವ ವೇಳೆಗೆ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ವೀಕ್ಷಕರಾಗಿ ಹೋಗುವಂತೆ ಸೂಚಿಸಿದರು. ಒಂದಿಡೀ ವರ್ಷ ಕೆಲಸ ಮಾಡಲು ಆಗಲಿಲ್ಲ. ಅದೇ ಸಂದರ್ಭದಲ್ಲಿ ಸರ್ಕಾರವೂ ಕೆಲಸ ಮಾಡಲಾಗಲಿಲ್ಲ’ ಎಂದರು.
‘ಈ ಸಮಸ್ಯೆಯ ನಿವಾರಣೆಗೆ ಒಂದು ದೇಶ, ಒಂದು ಚುನಾವಣೆಯೇ ಪರಿಹಾರ. ಒಂದೇ ಮತಗಟ್ಟೆಯಲ್ಲಿ ಲೋಕಸಭಾ ಚುನಾವಣೆಗೆ ಒಂದು ಮತಯಂತ್ರ, ವಿಧಾನಸಭಾ ಚುನಾವಣೆಗೆ ಇನ್ನೊಂದು ಮತಯಂತ್ರ ಇರಿಸಿದರೆ ಸಮಸ್ಯೆ ಏನು? ಈ ಪ್ರಶ್ನೆಯನ್ನು ನೀವೂ ಕೇಳಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಸಂವಾದದಲ್ಲಿ ಭಾಗಿಯಾಗಿದ್ದರು.
ಇಂದಿರಾ ಗಾಂಧಿ ಹಾಳುಗೆಡವಿದ್ದು’
‘ಸ್ವಾತಂತ್ರ್ಯ ಬಂದು ಮೊದಲ ಸರ್ಕಾರ ರಚನೆಯಾದ ನಂತರದ 15 ವರ್ಷ ದೇಶದಾದ್ಯಂತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಮ್ಮೆಗೇ ಚುನಾವಣೆ ನಡೆಸಲಾಗುತ್ತಿತ್ತು. 1967ರ ನಂತರ ಇಂದಿರಾ ಗಾಂಧಿ ಆಡಳಿತದಲ್ಲಿ ಹಲವು ರಾಜ್ಯಗಳಲ್ಲಿ ಇದ್ದ ಕಾಂಗ್ರೆಸ್ಸೇತರ ಸರ್ಕಾರಗಳನ್ನು ಬೀಳಿಸಿದರು. ಆನಂತರವೇ ಬೇರೆ–ಬೇರೆ ಅವಧಿಯಲ್ಲಿ ಚುನಾವಣೆ ನಡೆಯಲಾರಂಭಿಸಿತು’ ಎಂದು ಬಿಜೆಪಿ ನಾಯಕ ಅನಿಲ್ ಆ್ಯಂಟನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.