ADVERTISEMENT

ಕೆಎಂಎಫ್‌ನಿಂದ ಬ್ಯಾಂಕ್ ತೆರೆಯಿರಿ: ಬಸವರಾಜ ಬೊಮ್ಮಾಯಿ ಸಲಹೆ

ಮಹಾಮಂಡಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 16:53 IST
Last Updated 29 ಸೆಪ್ಟೆಂಬರ್ 2021, 16:53 IST
ಕೆಎಂಎಫ್‌ ಹೊಸ ಯೋಜನೆಗಳ ಉದ್ಘಾಟನೆಗೆ ಮುನ್ನ ಹೊರಗೆ ಕಟ್ಟಲಾಗಿದ್ದ ಹಸುವಿಗೆ ಹೂವಿನ ಹಾರ ಹಾಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂತರ ಅದರ ಹಣೆಗೆ ಮುತ್ತಿಟ್ಟರು. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಇದ್ದರು – ಪ್ರಜಾವಾಣಿ ಚಿತ್ರ
ಕೆಎಂಎಫ್‌ ಹೊಸ ಯೋಜನೆಗಳ ಉದ್ಘಾಟನೆಗೆ ಮುನ್ನ ಹೊರಗೆ ಕಟ್ಟಲಾಗಿದ್ದ ಹಸುವಿಗೆ ಹೂವಿನ ಹಾರ ಹಾಕಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂತರ ಅದರ ಹಣೆಗೆ ಮುತ್ತಿಟ್ಟರು. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಾಲು ಉತ್ಪಾದಕರ ಸಹಕಾರ ಸಂಘಗಳ ಹಣಕಾಸು ವಹಿವಾಟು ನಿರ್ವಹಿಸಲು ಕೆಎಂಎಫ್‌
ನಿಂದಲೇ (ಕರ್ನಾಟಕ ಹಾಲು ಮಹಾಮಂಡಳ) ಬ್ಯಾಂಕ್ ತೆರೆದು ಮುನ್ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಕರ್ನಾಟಕ ಹಾಲು ಮಹಾಮಂಡಳದ 10 ಹೊಸ ಯೋಜನೆಗಳ ಸಾಮೂಹಿಕ ಉದ್ಘಾಟನಾ ಸಮಾರಂಭ
ದಲ್ಲಿ ಮಾತನಾಡಿದ ಅವರು, ‘ಬ್ಯಾಂಕ್ ತೆರೆಯುವ ನಿರ್ಧಾರ ಕೈಗೊಂಡರೆ ಅದಕ್ಕೆ ಮೂಲಧನವಾಗಿ ₹100 ಕೋಟಿಯನ್ನು ಸರ್ಕಾರದಿಂದ ನೀಡಲಾಗುವುದು’ ಎಂದು ತಿಳಿಸಿದರು.

‘ಬ್ಯಾಂಕ್ ತೆರೆಯಲು ಬೇಕಿರುವ ಎಲ್ಲ ರೀತಿಯ ವ್ಯವಸ್ಥೆ ಕೆಎಂಎಫ್‌ನಲ್ಲಿ ಇದೆ. ಅದನ್ನು ಬಳಸಿಕೊಂಡು ಬ್ಯಾಂಕ್ ತೆರೆದರೆ 14 ಒಕ್ಕೂಟಗಳು ಸ್ವಾವಲಂಬಿಯಾಗಬಹುದು’ ಎಂದರು.

ADVERTISEMENT

‘ಹಾಲು ಉತ್ಪಾದಕರಿಗೆ ಕೆಳ ಹಂತದಲ್ಲಿ ಪ್ರೋತ್ಸಾಹ ದೊರೆಯಬೇಕಿದೆ. ಈ ಕೆಲಸ ಮಾಡುತ್ತಿರುವ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿ ಮತ್ತು ಸಹಾಯಕರಿಗೆ ಪ್ರೋತ್ಸಾಹ ಧನ ನೀಡಲು ₹50 ಕೋಟಿ ನೆರವು ನೀಡಲಾಗುವುದು. ಮುಂದಿನ ವರ್ಷದಿಂದ ಈ ಖರ್ಚನ್ನೂ ಕೆಎಂಎಫ್‌ ನಿಭಾಯಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಸಹಕಾರಿ ಕ್ಷೇತ್ರವೇ ಸರ್ಕಾರವನ್ನು ಆಳುತ್ತಿದೆ. ಕರ್ನಾಟಕದಲ್ಲಿ ಸರ್ಕಾರವೇ ಸಹಕಾರಿ ರಂಗವನ್ನು ಆಳುತ್ತಿದೆ. ಇದು ಬದಲಾಗಬೇಕು. ಸಹಕಾರಿ ರಂಗದ ಪದಾಧಿಕಾರಿಗಳು ಮಾತ್ರ ಸಾಹುಕಾರ
ರಾದರೆ ಸಾಲದು, ಸಹಕಾರ ಸಂಸ್ಥೆಗಳು ಸಾಹುಕಾರ ಆಗುವಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದ್ದು, ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕಿದೆ. ಇದಕ್ಕೆ ಕೆಎಂಎಫ್‌ ಸಹಕಾರ ಬೇಕಿದೆ. ಲಾಭ–ನಷ್ಟ ಎರಡೂ ಇಲ್ಲದಂತೆ ಗೋಶಾಲೆಗಳನ್ನು ನಡೆಸಲು ಯೋಜನೆ ರೂಪಿಸೋಣ. ಆ ಮೂಲಕ ಗೋವುಗಳ ಋಣ ತೀರಿಸೋಣ’ ಎಂದರು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ‘7 ಲಕ್ಷ ಲೀಟರ್ ಹಾಲನ್ನು ಪುಡಿ ಮಾಡಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದೆ. ಅದರ ಬದಲು 7 ಲಕ್ಷ ಲೀಟರ್ ಹಾಲನ್ನು ಟೆಟ್ರಾ ಪ್ಯಾಕ್ ಮೂಲಕ ಮಕ್ಕಳಿಗೆ ವಿತರಣೆ ಮಾಡಲು ಸರ್ಕಾರ ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಹಾಲನ್ನು ಪುಡಿಯಾಗಿ ಮಾರ್ಪಡಿಸುವ ಒತ್ತಡ ಕೆಎಂಎಫ್‌ಗೆ ಕಡಿಮೆಯಾಗಲಿದೆ’ ಎಂದು ಹೇಳಿದರು.

‘ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ₹5 ರಿಂದ ₹ 6ಕ್ಕೆ ಹೆಚ್ಚಳ ಮಾಡಬೇಕು. ಎಲ್ಲ ಹಾಲು ಒಕ್ಕೂಟಗಳಿಂದ ₹110 ಕೋಟಿ ವಿದ್ಯುತ್ ಬಿಲ್ ಪಾವತಿಸಲಾಗುತ್ತಿದೆ. ಎಲ್ಲೆಡೆ ಸೌರ ವಿದ್ಯುತ್ ಚಾವಣಿ ಅಳವಡಿಸಿಕೊಂಡರೆ ಈ ಮೊತ್ತ ಉಳಿತಾಯವಾಗಲಿದೆ. ಸರ್ಕಾರ 4 ಜಿ ವಿನಾಯಿತಿ ನೀಡುವ ಮೂಲಕ ಈ ಯೋಜನೆಗೆ ಸಹಕಾರ ನೀಡಬೇಕು’ ಎಂದು ಕೋರಿದರು.

ಹಾಲು ಮಾರಾಟ ದರ ಹೆಚ್ಚಳ ಸದ್ಯಕ್ಕಿಲ್ಲ

‘ಹಾಲು ಮಾರಾಟ ದರ ಏರಿಕೆ ಮಾಡಬೇಕು ಎಂಬ ಮನವಿ ಸಂಬಂಧ ಯಾವುದೇ ಭರವಸೆ ನೀಡುವುದಿಲ್ಲ’ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

‘ಈ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲಾಗದು. ಆದರೆ, ರೈತರ ನೆರವಿಗೆ ಸದಾ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿಯೇ ಪ್ರೋತ್ಸಾಹ ಧನ ನೀಡಲಾಗುತ್ತಿದೆ’ ಎಂದರು.

ಹೊಸ ಯೋಜನೆಗಳು

l ನಂದಿನಿ ಹೈಟೆಕ್ ಮೆಗಾ ಹಾಲಿನ ಪುಡಿ ಉತ್ಪಾದನಾ ಘಟಕ (ಕಣ್ವ, ರಾಮನಗರ ಜಿಲ್ಲೆ)

l ಪಶು ಆಹಾರ ಉತ್ಪಾದನಾ ಘಟಕ–2 (ಧಾರವಾಡ)

l ಪಶು ಆಹಾರ ಉತ್ಪಾದನಾ ಘಟಕ–2 (ಗುಬ್ಬಿ, ತುಮಕೂರು ಜಿಲ್ಲೆ)

l ಹೈಟೆಕ್ ಬುಲ್ ಮದರ್ ಫಾರಂ ಮತ್ತು ಮೇವು ಅಭಿವೃದ್ಧಿ ಕೇಂದ್ರ (ಹೆಸರಘಟ್ಟ, ಬೆಂಗಳೂರು)

l ರಾಜ್ಯ ಕೇಂದ್ರೀಯ ಪ್ರಯೋಗಾಲಯ ಕೆಎಂಎಫ್ ಸಂಕೀರ್ಣ (ಬೆಂಗಳೂರು)

l ಕೆಎಂಎಫ್ ತರಬೇತಿ ಕೇಂದ್ರ (ಕಲಬುರ್ಗಿ ಡೇರಿ ಆವರಣ)

l ಹಾಸನ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿ

l ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿ

l ಶಿಕಾರಿಪುರ ಪಶು ಆಹಾರ ಘಟಕದಲ್ಲಿ ಕಾಕಂಬಿ ಶೇಖರಣಾ ಟ್ಯಾಂಕ್

l ಬೆಣ್ಣೆ ದಾಸ್ತಾನಿನ ಡೀಪ್ ಫ್ರೀಜರ್ ಘಟಕ ಚಲ್ಲಘಟ್ಟ (ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.