ADVERTISEMENT

ವಕ್ಫ್‌ ಮಸೂದೆಗೆ ವಿರೋಧ: ಕೇಂದ್ರದ ಸರ್ಕಾರದ ನಡೆಗೆ ರಾಜ್ಯದ ತಕರಾರು

ರಾಜೇಶ್ ರೈ ಚಟ್ಲ
Published 7 ಮಾರ್ಚ್ 2025, 0:48 IST
Last Updated 7 ಮಾರ್ಚ್ 2025, 0:48 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ವಕ್ಫ್‌ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಡ್ಡು ಹೊಡೆಯಲು ಮುಂದಾಗಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಮಸೂದೆ ಹಿಂಪಡೆಯುವಂತೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಮಂಡಿಸಲು ನಿರ್ಧರಿಸಿದೆ.

ಸಂಸತ್ತಿನ ಜಂಟಿ ಸಮಿತಿಯು (ಜೆಪಿಸಿ) 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಗೆ (1995ರ ಕೇಂದ್ರ ಕಾಯ್ದೆ ಸಂಖ್ಯೆ 43) 14 ತಿದ್ದುಪಡಿಗಳನ್ನು ಪ್ರಸ್ತಾಪಿಸಿರುವ ವರದಿಯನ್ನು ಲೋಕಸಭೆಯಲ್ಲಿ ಈಗಾಗಲೇ ಮಂಡಿಸಿದೆ.

ADVERTISEMENT

ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ನಿರ್ಣಯ ಅಂಗೀಕರಿಸಿವೆ. ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ಮತ್ತು ವಿರೋಧ ಪಕ್ಷ ಯುಡಿಎಫ್‌ ರಂಗಗಳು ವಿಧಾನಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದರೆ, ಪಶ್ವಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ವಿರೋಧದ ನಡುವೆ ಅಲ್ಲಿನ ಟಿಎಂಸಿ ಸರ್ಕಾರ ಧ್ವನಿಮತದಿಂದ ನಿರ್ಣಯ ತೆಗೆದುಕೊಂಡಿದೆ.

ರಾಜ್ಯದ ಸರ್ಕಾರದ ನಿರ್ಣಯವೇನು?

1995ರ ವಕ್ಫ್ ಕಾಯ್ದೆಗೆ 2013ರಲ್ಲಿ ತಂದ ತಿದ್ದು‍ಪಡಿಯೂ ಸೇರಿದಂತೆ ಈವರೆಗೆ ಮಾಡಿರುವ ತಿದ್ದುಪಡಿಗಳ ಪ್ರಕಾರ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಚರ ಅಥವಾ ಸ್ಥಿರ ಆಸ್ತಿ ಮತ್ತು ವಸ್ತುಗಳ ಪಾಲಕರಾಗಿ ರಾಜ್ಯ ವಕ್ಫ್‌ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಕಾಯ್ದೆಯ ನಮೂದು 28ರ ಅಂಶವು (ದತ್ತಿ ಸಂಸ್ಥೆಗಳು, ದತ್ತಿ ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು) ಸಮವರ್ತಿ ಪಟ್ಟಿಯಲ್ಲಿದೆ.

ವಕ್ಫ್‌ ಎನ್ನುವುದು ಒಂದು ವಿಶೇಷ ಪರಿಕಲ್ಪನೆ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಮಾತ್ರ ಒಳಪಡುವ ವಿಷಯವಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಉದ್ದೇಶಿತ ವಕ್ಫ್‌ ಕಾಯ್ದೆಯ ತಿದ್ದುಪಡಿಯು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸುತ್ತದೆ ಎಂಬುದು ರಾಜ್ಯದ ಸರ್ಕಾರದ ಪ್ರತಿಪಾದನೆಯಾಗಿದೆ.

ಸಂವಿಧಾನದ 26ನೇ ವಿಧಿಯು ವಕ್ಫ್‌ ದತ್ತಿಗಳು ಮತ್ತು ವಕ್ಫ್‌ ಸಂಸ್ಥೆಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಆಯಾ ಧಾರ್ಮಿಕ ಸಮುದಾಯಗಳಿಗೆ ಅದರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅಸ್ವಿತ್ವದಲ್ಲಿರುವ ವಕ್ಫ್ ಕಾಯ್ದೆಯು 1954ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ಬಲವಾದ ಕಾನೂನು ಆಗಿದೆ. ನಂತರ 1995ರಲ್ಲಿ ಈ ಕಾಯ್ದೆಗೆ ಸಮಗ್ರವಾಗಿ ತಿದ್ದುಪಡಿ ಮಾಡಲಾಗಿತ್ತು.

ಕೇಂದ್ರ ಸರ್ಕಾರದ ಉದ್ದೇಶಿತ ತಿದ್ದುಪಡಿಯು ಕಾಯ್ದೆಯ ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಧಕ್ಕೆ ಉಂಟು ಮಾಡುತ್ತದೆ. ಯಾಕೆಂದರೆ, ವಕ್ಫ್ ಮಂಡಳಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸದಸ್ಯರು ಇರುತ್ತಾರೆ. ಆದರೆ, ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಲಾಗುತ್ತದೆ.  ಮೂಲಭೂತ ಹಕ್ಕುಗಳು, ಸ್ವಾತಂ‌ತ್ರ್ಯ, ಒಕ್ಕೂಟ ವ್ಯವಸ್ಥೆ, ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ನಾಗರಿಕ ನಂಬಿಕೆಯ ಹಕ್ಕನ್ನು ರಕ್ಷಿಸಿಕೊಳ್ಳಬೇಕಾಗಿದೆ. ಈ ಎಲ್ಲ ಕಾರಣಗಳಿಂದ, ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ನಿಬಂಧನೆಗಳನ್ನು ಒಳಗೊಂಡಿರುವ ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲೇಬಾರದು ಎಂದು ಎರಡೂ ಸದನದಲ್ಲಿ ನಿರ್ಣಯ ಮಂಡಿಸಿ ವಿನಂತಿಸಲು ರಾಜ್ಯ ಸರ್ಕಾರ ಮುಂದಾಗಿದೆ.

‘ಅಧಿಕಾರ ಕಸಿದುಕೊಳ್ಳಲು ತಿದ್ದುಪಡಿ’

‘ಉದ್ದೇಶಿತ ತಿದ್ದುಪಡಿ ಮಸೂದೆಯಲ್ಲಿ ಮಂಡಿಸಲಾದ ನಿಬಂಧನೆಗಳು ವಕ್ಫ್‌ಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರ್ಕಾರಗಳಿಂದ ಅನೇಕ ಅಧಿಕಾರವನ್ನು ಕಸಿದುಕೊಳ್ಳುವ ಯತ್ನದ ಭಾಗವಾಗಿದೆ’ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

‘ಸಂವಿಧಾನದ ಒಕ್ಕೂಟ ತತ್ವಗಳು ಮತ್ತು ವಕ್ಫ್‌ನ ಮೇಲ್ವಿಚಾರಣೆಯ ಹೊಣೆ ಹೊಂದಿರುವ ಮಂಡಳಿಗಳಿಗೆ ವಿರುದ್ಧವಾಗಿದೆ. ವಕ್ಫ್ ಮತ್ತು ವಕ್ಫ್‌ ನ್ಯಾಯಮಂಡಳಿಯ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುವ ಮಂಡಳಿಗಳ ಕಾರ್ಯಗಳು ಮತ್ತು ಅಧಿಕಾರಗಳನ್ನು ದುರ್ಬಲ
ಗೊಳಿಸುತ್ತದೆ ಅಥವಾ ರದ್ದುಗೊಳಿಸುತ್ತದೆ. ಜೊತೆಗೆ, ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ದೃಷ್ಟಿಕೋನಗಳನ್ನು ಉಲ್ಲಂಘಿಸುತ್ತದೆ’ ಎಂದು ಪ್ರತಿಪಾದಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.