ADVERTISEMENT

ಬಿಎಸ್‌ವೈ ರೀತಿಯಲ್ಲಿ ಮುಂದಿನ 45 ವರ್ಷ ಪಕ್ಷ ಸಂಘಟನೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:15 IST
Last Updated 25 ಫೆಬ್ರುವರಿ 2023, 22:15 IST
   

ದಾವಣಗೆರೆ: ‘ರಾಜ್ಯದ ಆಧುನಿಕ ಭಗೀರಥರಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರು 45 ವರ್ಷಗಳ ಕಾಲ ಪಕ್ಷವನ್ನು ಸಂಘಟಿಸಿದ್ದಾರೆ. ಇನ್ನು ಮುಂದಿನ 40–45 ವರ್ಷಗಳ ಕಾಲ ನಾನು ರಾಜ್ಯ ಸುತ್ತಿ ಪಕ್ಷ ಸಂಘಟಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ದಾವಣಗೆರೆಯಲ್ಲಿ ಶನಿವಾರ ನಡೆದ ಬಿಜೆಪಿ ಯುವ ಮೋರ್ಚಾದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬಿಜೆಪಿಯನ್ನು ಸಂಘಟಿಸಿ ಅಧಿಕಾರಕ್ಕೆ ತಂದು ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ರೈತ ಬಜೆಟ್‌ ಮಂಡನೆ, ನೀರಾವರಿಗೆ ಪ್ರೋತ್ಸಾಹ, ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್‌ ಹೀಗೆ ಅನೇಕ ಯೋಜನೆಗಳ ಮೂಲಕ ನೆರವಾದರು’ ಎಂದು ನೆನಪು ಮಾಡಿಕೊಂಡರು.

ADVERTISEMENT

‘ಹಿಂದೂಗಳ ಹತ್ಯೆಯಾದಾಗ ಮಾತನಾಡದ ಕಾಂಗ್ರೆಸ್‌ನ ನಾಯಕರಿಗೆ ಈಗ ನಾನೂ ಹಿಂದೂ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಅಧಿಕಾರ ಇದ್ದಾಗ ವೀರಶೈವ–ಲಿಂಗಾಯತರನ್ನು ಒಡೆಯುವ ಪ್ರಯತ್ನ ಮಾಡಿದರು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯೊಳಗೆ ಬೆಂಕಿ ಹಚ್ಚಿದಾಗ ಅಲ್ಪಸಂಖ್ಯಾತರ ಮತ ತಪ್ಪುತ್ತೆ ಎಂಬ ಕಾರಣಕ್ಕೆ ದಲಿತ ಶಾಸಕನ ನೆರವಿಗೆ ಕಾಂಗ್ರೆಸ್‌ ಬರಲಿಲ್ಲ’ ಎಂದು ಟೀಕಿಸಿದರು. ಯಡಿಯೂರಪ್ಪ ಅವರನ್ನು ನೆನಪಿಸಿಕೊಂಡು ಗದ್ಗದಿತರಾದ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ‘ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ನೋವಿನ ಸಂಗತಿ. ಆದರೆ, ಅವರ ಮಗ ಬಿ.ವೈ. ವಿಜಯೇಂದ್ರ ನಮ್ಮ ನಾಯಕರಾಗಿರುತ್ತಾರೆ ಎಂಬುದು ಸಂತಸದ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.