ADVERTISEMENT

300ರಲ್ಲಿ 43 ಹುದ್ದೆ ಭರ್ತಿಗೆ ಪ್ರಸ್ತಾವ; ಉದ್ಯೋಗ ಆಕಾಂಕ್ಷಿಗಳ ಆಕ್ರೋಶ

ಕಡಿಮೆ ಹುದ್ದೆಗಳ ಪ್ರಸ್ತಾವ

ರಾಜೇಶ್ ರೈ ಚಟ್ಲ
Published 13 ನವೆಂಬರ್ 2022, 20:05 IST
Last Updated 13 ನವೆಂಬರ್ 2022, 20:05 IST
   

ಬೆಂಗಳೂರು: ಕೆಎಎಸ್‌ (ಕಿರಿಯ ಶ್ರೇಣಿ) 40 ಹುದ್ದೆಗಳು ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ, ಕೇವಲ 43 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಪ್ರಸ್ತಾವ ಕಳುಹಿಸಿರುವುದು ಉದ್ಯೋಗ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆದರೆ, ಪ್ರಸ್ತಾವದ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಸ್ಪಷ್ಟನೆ ಕೇಳಿರುವ ಕೆಪಿಎಸ್‌ಸಿ, ನ. 1ರಿಂದ ಅನ್ವಯವಾಗುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಸರ್ಕಾರ ಹೆಚ್ಚಿಸಿದೆ. ಹೀಗಾಗಿ, ಮೀಸಲಾತಿಯ ಹುದ್ದೆಗಳನ್ನು ನಿಗದಿಪಡಿಸಿ ಪರಿಷ್ಕೃತ ಪ್ರಸ್ತಾವ ಕಳುಹಿಸುವಂತೆ ತಿಳಿಸಿದೆ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಿಸಿ ಅ. 23ರಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಅದನ್ನು ನ. 1ರಿಂದ ಜಾರಿಗೊಳಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆದರೆ, ಮೀಸಲಾತಿ ಕೋಟಾದಲ್ಲಿ ಹೆಚ್ಚಳವಾಗಲಿರುವ ಹುದ್ದೆಗಳನ್ನು ರೋಸ್ಟರ್‌ನಲ್ಲಿ ಯಾವ ಸ್ಥಾನದಲ್ಲಿ ನೀಡಬೇಕೆಂಬ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ.

ADVERTISEMENT

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಮೇಲೆ ಕಣ್ಣಿಟ್ಟು 4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಧಾರವಾಡ, ಬಾಗಲಕೋಟೆ, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಗಳಲ್ಲಿರುವ ಕೆಎಎಸ್‌ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ, ಐದು ವರ್ಷಗಳ ಬಳಿಕ ಅತೀ ಕಡಿಮೆ ಹುದ್ದೆಗಳ ಭರ್ತಿಗೆ ಪ್ರಸ್ತಾವ ಸಲ್ಲಿಸಿದೆ.

‘ಎಸ್‌ಸಿ, ಎಸ್‌ಟಿ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿ ಅಧಿಸೂಚನೆ ಹೊರಡಿಸಿರುವುದೂ ಗೊತ್ತಿದ್ದೂ ಈ ರೀತಿಯಲ್ಲಿ ಕೆಪಿಎಸ್‌ಸಿಗೆ ಪ್ರಸ್ತಾವ ಸಲ್ಲಿಸಿರುವುದು ಡಿಪಿಎಆರ್‌ ಅಧಿಕಾರಿಗಳ ಬೇಜವಾಬ್ದಾರಿ ನಡೆ. ಹುದ್ದೆ ನಿರೀಕ್ಷೆಯಲ್ಲಿ ತರಬೇತಿ ನಿರತ ಅಭ್ಯರ್ಥಿಗಳ ಜೀವನದ ಜೊತೆಗಿನ ಚೆಲ್ಲಾಟ’ ಎಂದು ಕೆಎಎಸ್‌ ಹುದ್ದೆ ಆಕಾಂಕ್ಷಿ ವಿಜಯಪುರದ ಸಂತೋಷ್‌ಕುಮಾರ್‌ ಕಿಡಿಕಾರಿದರು.

‘ಮೀಸಲಾತಿ ಹೆಚ್ಚಳ; ಸ್ಪಷ್ಟನೆ ಅಗತ್ಯ’
‘ನ. 1ರ ನಂತರದ ನೇಮಕಾತಿಗಳನ್ನು ಎಸ್‌ಸಿ, ಎಸ್‌ಟಿ ವರ್ಗಕ್ಕೆ ಹೆಚ್ಚಿಸಿದ ಮೀಸಲಾತಿಗೆ ಅನುಗುಣವಾಗಿ ಮಾಡಬೇಕಿದೆ. ಹೀಗಾಗಿ, ಗೆಜೆಟೆಡ್‌ ಪ್ರೊಬೇಷನರಿ, ವಿವಿಧ ಇಲಾಖೆಗಳಲ್ಲಿ ಶೀಘ್ರಲಿಪಿಗಾರ, ಡೇಟಾ ಆಪರೇಟರ್‌ ಹುದ್ದೆಗಳ ನೇಮಕಾತಿ ಸೇರಿ ಕೆಲವು ಪ್ರಸ್ತಾವಗಳು ನ. 4 ಮತ್ತು ಆ ನಂತರ ಬಂದಿವೆ. ಅವುಗಳ ನೇಮಕಾತಿ ಅಧಿಸೂಚನೆ ಹೊರಡಿಸುವ ಮೊದಲು ಹೆಚ್ಚಳಗೊಳಿಸಿದ ಮೀಸಲಾತಿ ನಿಗದಿ‍ಪಡಿಸುವ ಕುರಿತು ಆಯಾ ಇಲಾಖೆಗಳಿಂದ ಸ್ಪಷ್ಟನೆ ಕೇಳಲಾಗಿದೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.