ADVERTISEMENT

ಏಮ್ಸ್‌: ಆಮ್ಲಜನಕ ಘಟಕಕ್ಕೆ ಧರ್ಮೇಂದ್ರ ಪ್ರಧಾನ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 12:05 IST
Last Updated 22 ಜೂನ್ 2021, 12:05 IST
ನೂತನ ಆಮ್ಲಜನಕ ಉತ್ಪಾದನಾ ಘಟಕಕ್ಕೆ ತೆರಳಿ ನಿರ್ಮಲಾನಂದನಾಥ ಸ್ವಾಮೀಜಿ ದೀಪ ಬೆಳಗಿದರು
ನೂತನ ಆಮ್ಲಜನಕ ಉತ್ಪಾದನಾ ಘಟಕಕ್ಕೆ ತೆರಳಿ ನಿರ್ಮಲಾನಂದನಾಥ ಸ್ವಾಮೀಜಿ ದೀಪ ಬೆಳಗಿದರು   

ನಾಗಮಂಗಲ: ತಾಲ್ಲೂಕಿನ ಬಿ.ಜಿ ನಗರದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಮಂಗಳವಾರ ಆನ್‌ಲೈನ್‌ ಮೂಲಕ ಚಾಲನೆ ನೀಡಿದರು.

ಘಟಕವು ಪ್ರತಿ ನಿಮಿಷಕ್ಕೆ 700 ಲೀಟರ್ ದ್ರವರೂಪದ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು ಒಂದೇ ಬಾರಿಗೆ 150 ಆಮ್ಲಜನಕ ಹಾಸಿಗೆ, 40 ವೆಂಟಿಲೇಟರ್‌ಯುಕ್ತ ಹಾಸಿಗೆಗಳಿಗೆ ಆಮ್ಲಜನಕ ಪೂರೈಸಬಹುದಾಗಿದೆ. ಕೋವಿಡ್‌ 1ನೇ ಅಲೆ ತೀವ್ರಸ್ವರೂಪದಲ್ಲಿದ್ದಾಗ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅತ್ಯಾಧುನಿಕ ಆಮ್ಲಜನಕ ಉತ್ಪಾಧನಾ ಘಟಕ ನಿರ್ಮಾಣಕ್ಕೆ ಮುಂದಾಗಿದ್ದರು.

ಅದಕ್ಕಾಗಿ ಕುದುರೆಮುಖದ ಕಬ್ಬಿಣದ ಅದಿರು ಕಂಪನಿಯೊಂದರ ಮೂಲಕ ಯೂರೋಪ್‌ನಿಂದ ಅಗತ್ಯ ಉಪಕರಣಗಳನ್ನು ತರಿಸಲಾಗಿತ್ತು. ತಿಂಗಳೊಳಗೆ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು ಲೋಕಾರ್ಪಣೆ ಗೊಳಿಸಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್‌ ‘ಕೋವಿಡ್‌ ಪರಿಸ್ಥಿತಿಯಲ್ಲಿ ಆದುಚುಂಚನಗಿರಿ ಮಠ ಮಾಡಿರುವ ವೈದ್ಯಕೀಯ ಸೇವೆ ಅನನ್ಯವಾದುದು. ಮಠದಿಂದ ವತಿಯಿಂದಲೇ ಆಮ್ಲಜನಕ ಉತ್ಪಾಧನಾ ಘಟಕ ನಿರ್ಮಾಣಗೊಂಡಿರುವ ಕಾರ್ಯ ಮಾದರಿಯಾದುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆನ್‌ಲೈನ್‌ನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಶಾಸಕ ಸುರೇಶ್‌ಗೌಡ ಇದ್ದರು. ನಂತರ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕೇಂದ್ರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಸನ್ನನಾಥ ಸ್ವಾಮೀಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.