ADVERTISEMENT

ಸಾಧಕಿಯರಿಗೆ ಸಲಾಂ: ಪಡಿಯಮ್ಮನ ಹೋರಾಟ!

ಸಿದ್ದನಗೌಡ ಪಾಟೀಲ
Published 15 ಅಕ್ಟೋಬರ್ 2018, 4:50 IST
Last Updated 15 ಅಕ್ಟೋಬರ್ 2018, 4:50 IST
ಪಡಿಯಮ್ಮ
ಪಡಿಯಮ್ಮ   

ಕೊಪ್ಪಳ : ಅದೊಂದು ದಿನ ಆ ವ್ಯಕ್ತಿ ಬಾಲಕಿಯೊಬ್ಬಳ ಪೋಷಕರಿಗೆ 50 ಸಾವಿರ ರೂ. ನೀಡಿ ಆಕೆಯನ್ನು ದೇವದಾಸಿ ಮಾಡಲು ಮುಂದಾಗಿದ್ದ. ವಿಷಯ ತಿಳಿದ ಕೆಲ ಯುವಕರು ಆತನ ಮೇಲೆ ಮುಗಿಬಿದ್ದರು. ಸುದ್ದಿ ತಿಳಿದು ಧಾವಿಸಿದ ಪಡಿಯಮ್ಮ ‘ಶಿಕ್ಷೆ ನೀಡುವುದು ನಮ್ಮ ಕೆಲಸವಲ್ಲ, ದೂರು ನೀಡೋಣ. ಆ ಕೆಲಸವನ್ನು ಪೊಲೀಸರು ಮಾಡುತ್ತಾರೆ’ ಎಂದು ಯುವಕರಿಗೆ ಬುದ್ಧಿಹೇಳಿ ಸಮಾಧಾನಪಡಿಸಿದರು.

ಅಷ್ಟಕ್ಕೆ ಸುಮ್ಮನಾಗದ ಪಡಿಯಮ್ಮ ‘ಆ ವ್ಯಕ್ತಿ’ಯ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಿದರು. ದೇವದಾಸಿ ಪದ್ಧತಿ ಕೆಡಕು ಕುರಿತು ಎಳೆ ಎಳೆಯಾಗಿ ತಿಳಿ ಹೇಳಿದರು. ಪಡಿಯಮ್ಮನ ಈ ‘ಗಾಂಧಿಗಿರಿ’ಯಿಂದ ಮನಃಪರಿವರ್ತನೆಯಾದ ‘ಆ ವ್ಯಕ್ತಿ’ ಇವತ್ತು ಇವರೊಂದಿಗೆ ಒಬ್ಬನಾಗಿ ಹೋರಾಟದಲ್ಲಿ ತೊಡಗಿಕೊಂಡಿದ್ದಾನೆ!

ಪಡಿಯಮ್ಮ ಮಾಜಿ ದೇವದಾಸಿ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕು ಕ್ಯಾದಿಗುಂಪಾ ಗ್ರಾಮ. ‘ವಿಮುಕ್ತ ದೇವದಾಸಿ ಸಂಘ’ ಕಟ್ಟಿಕೊಂಡು ಶೋಷಿತರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.

ADVERTISEMENT

ಏಳು ವರ್ಷದವಳಾಗಿದ್ದಾಗಲೇ ಪಡಿಯಮ್ಮ ಅವರಿಗೆ ‘ಮುತ್ತು’ ಕಟ್ಟಿಸಿ ದೇವದಾಸಿ ಪಟ್ಟಕಟ್ಟಲಾಯಿತು. ನಂತರ ಆಕೆ ದುಡಿಯಲು ಗೋವಾಕ್ಕೆ ಗುಳೆ ಹೋದರು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ತಾಯಿಯಾದರು. ಪುತ್ರರು ಅಕಾಲಿಕವಾಗಿ ಮೃತಪಟ್ಟರು. ಎದೆಗುಂದದ ಪಡಿಯಮ್ಮ ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಭಾರವನ್ನು ತಾವೇ ಹೊತ್ತುಕೊಂಡಿದ್ದಾರೆ. ಪಿತ್ರಾರ್ಜಿತವಾದ ಆರು ಎಕರೆ ಹೊಲದಲ್ಲಿ ಕೃಷಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಸಮಾಜ ಕಲಿಸಿದ ಪಾಠ, ಹೋರಾಟದಿಂದ ಪಡೆದ ಅನುಭವ, ಮಾನವೀಯತೆಯೇ ಪಡಿಯಮ್ಮನವರ ದೊಡ್ಡ ಆಸ್ತಿ. ಅವುಗಳಿಂದ ಆತ್ಮವಿಶ್ವಾಸ ಹೆಚ್ಚಾಗಿದೆ ಎನ್ನುತ್ತಾರೆ.

‘ಸರ್ಕಾರದ ಸೌಲಭ್ಯಕ್ಕಾಗಿ ನಾವು ಸದಾ ಹೋರಾಟ ಮಾಡುತ್ತೇವೆ. ದೇವದಾಸಿಯರಿಗೆ ಮತ್ತು ಮಕ್ಕಳಿಗೆ ಸೌಲಭ್ಯ ನೀಡಬೇಕು. ಈ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.