ADVERTISEMENT

ಪುನೀತ್‌ ರಾಜ್‌ಕುಮಾರ್‌ಗೆ ಪದ್ಮಶ್ರೀ ಪ್ರಶಸ್ತಿ: ಕೇಂದ್ರಕ್ಕೆ ಶಿಫಾರಸು

ಕರ್ನಾಟಕ ರತ್ನ: ಶೀಘ್ರ ಪ್ರದಾನ– ಸಿ.ಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:17 IST
Last Updated 13 ಡಿಸೆಂಬರ್ 2021, 22:17 IST
ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಪಸಭಾಧ್ಯಕ್ಷ ಆನಂದ ಮಾಮನಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಸದಸ್ಯ ವಿ.ಮುನಿಯಪ್ಪ, ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಇದ್ದರು
ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಪಸಭಾಧ್ಯಕ್ಷ ಆನಂದ ಮಾಮನಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಸದಸ್ಯ ವಿ.ಮುನಿಯಪ್ಪ, ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಇದ್ದರು   

ಬೆಳಗಾವಿ (ಸುವರ್ಣ ವಿಧಾನಸೌಧ): ದಿವಂಗತ ಚಿತ್ರನಟ ಪುನೀತ್ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಘೋಷಿಸಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶೀಘ್ರದಲ್ಲೇ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚನಾ ಮಂಡನಾ ನಿರ್ಣಯದ ಮೇಲೆ ಮಾತನಾಡಿದ ಅವರು, ’ಚಿಕ್ಕವಯಸ್ಸಿನಲ್ಲೇ ಎಲ್ಲ ಕ್ಷೇತ್ರದಲ್ಲೂ ಅತ್ಯದ್ಭುತವಾದದ್ದನ್ನು ಸಾಧಿಸಿದ ಪುನೀತ್‌ ಅವರಿಗೆ ಪ್ರಶಸ್ತಿಯನ್ನು ಈಗಾಗಲೇ ಘೋಷಿಸಲಾಗಿದೆ. ಪ್ರಶಸ್ತಿ ದಿನಾಂಕವನ್ನು ಸದ್ಯವೇ ನಿರ್ಣಯ ಮಾಡಲಾಗುವುದು‘ ಎಂದು ಹೇಳಿದರು.

ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಲಿದೆ ಎಂದೂ ಅವರು ಹೇಳಿದರು.

ADVERTISEMENT

ಪದ್ಮಶ್ರೀ ಕೊಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ ಆಗ್ರಹಪೂರ್ವಕವಾಗಿ ಪ್ರತಿಪಾದಿಸಿದರು.

ಮಾಮಾ ಎನ್ನುತ್ತಿದ್ದ ಪುನೀತ್: ರಾಜ್‌ ಕುಮಾರ್ ಕುಟುಂಬದ ಜತೆಗಿನ ಒಡನಾಟವನ್ನು ಇದೇ ವೇಳೆ ಸ್ಮರಿಸಿದ ಸಿದ್ದರಾಮಯ್ಯ, ’ಚಾಮರಾಜನಗರದ ಭಾಷೆಯಲ್ಲೇ ತಮ್ಮ ಜತೆ ಅವರು ಮಾತನಾಡುತ್ತಿದ್ದವರು. ನಮ್ಮ ಭಾಗದವರು ಎನ್ನುವುದನ್ನು ‘ನಮ್ಮ ಕಾಡಿನವರು’ ಎಂದು ರಾಜ್‌ಕುಮಾರ್‌ ನಮ್ಮ ಕಡೆಯ ಭಾಷೆಯಲ್ಲೇ ಹೇಳುತ್ತಿದ್ದರು. ಪುನೀತ್‌ ಕೂಡ ನನ್ನನ್ನು ಮಾಮಾ ಎನ್ನುತ್ತಿದ್ದ. ರಾಜಕುಮಾರ ಸಿನಿಮಾ ಬಿಡುಗಡೆಯಾದಾಗ ನೋಡಿ ಎಂದು ಕೇಳಿಕೊಂಡಿದ್ದ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದನ್ನೇ ದಶಕಗಳ ಕಾಲ ಬಿಟ್ಟಿದ್ದ ನಾನು ಪುನೀತ್‌ಗಾಗಿ ಮೈಸೂರಿನ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.