ADVERTISEMENT

ಫಿರಂಗಿ ಬಳಸಿ ಪಾಕ್ ದಾಳಿ: ಬಿಎಸ್‌ಎಫ್‌ ಇನ್‌ಸ್ಪೆಕ್ಟರ್‌ ಜನರಲ್ ಮಾಹಿತಿ

ಪಿಟಿಐ
Published 15 ನವೆಂಬರ್ 2020, 20:39 IST
Last Updated 15 ನವೆಂಬರ್ 2020, 20:39 IST
ದಾಳಿಯಲ್ಲಿ ಮೃತಪಟ್ಟಿದ್ದ ಬಿಎಸ್‌ಎಫ್‌ ಯೋಧ ರಾಕೇಶ್ ದೊವಾಲ್ ಅವರಿಗೆ ಬಿಎಸ್‌ಎಫ್‌ನ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು -–ಪಿಟಿಐ ಚಿತ್ರ
ದಾಳಿಯಲ್ಲಿ ಮೃತಪಟ್ಟಿದ್ದ ಬಿಎಸ್‌ಎಫ್‌ ಯೋಧ ರಾಕೇಶ್ ದೊವಾಲ್ ಅವರಿಗೆ ಬಿಎಸ್‌ಎಫ್‌ನ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು -–ಪಿಟಿಐ ಚಿತ್ರ   

ಶ್ರೀನಗರ: ‘ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಡುವಣಗಡಿ ನಿಯಂತ್ರಣಾ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಸೇನೆಯು ಗುರುವಾರ ನಡೆಸಿದ ದಾಳಿಯಲ್ಲಿ ಫಿರಂಗಿಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ. ಇದರಿಂದಲೇ ನಮ್ಮಲ್ಲಿ ಹೆಚ್ಚು ಹಾನಿ ಸಂಭವಿಸಿದೆ’ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಇನ್‌ಸ್ಪೆಕ್ಟರ್‌ ಜನರಲ್ ರಾಜೇಶ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಸೇನೆಯು ಗುರುವಾರ ರಾತ್ರಿ ಎಲ್‌ಒಸಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನ ಸೇನೆಯ 11 ಸೈನಿಕರು ಮೃತಪಟ್ಟಿದ್ದರು. ಪಾಕಿಸ್ತಾನ ಸೇನೆಯ ಬಂಕರ್‌ಗಳಿಗೆ ಹಾನಿಯಾಗಿತ್ತು. ಆದರೆ ಪಾಕಿಸ್ತಾನದ ಸೈನಿಕರು ಮತ್ತೆ ದಾಳಿ ನಡೆಸಿದ್ದರು. ದಾಳಿ ಶುಕ್ರವಾರ ಸಂಜೆಯವರೆಗೆ ಮುಂದುವರಿದಿತ್ತು. ಪಾಕಿಸ್ತಾನದ ದಾಳಿಯಲ್ಲಿ ಭಾರತದ 11 ಜನರು ಮೃತಪಟ್ಟಿದ್ದರು.

‘ಪಾಕಿಸ್ತಾನದ ಸೇನೆಯು ಫಿರಂಗಿಗಳನ್ನು ಬಳಸಿ ದಾಳಿ ನಡೆಸಿದ್ದರಿಂದ ವಿಪರೀತ ಹಾನಿಯಾಗಿದೆ. ಜನ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ.ಇದರಿಂದ ಹಲವು ಮನೆಗಳು ಧ್ವಂಸವಾಗಿವೆ. ನಾಗರಿಕರೂ ಮೃತಪಟ್ಟಿದ್ದಾರೆ. ಪಾಕಿಸ್ತಾನ ಸೇನೆಯು ಮಾನವ ಹಕ್ಕುಗಳಿಗೆ ಧಕ್ಕೆ ತಂದಿದೆ’ ಎಂದು ರಾಜೇಶ್ ಮಿಶ್ರಾ ಹೇಳಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಬಿಎಸ್‌ಎಫ್‌ನ ಒಬ್ಬ ಯೋಧನಿಗೆ ಅಂತಿಮ ನಮನ ಸಲ್ಲಿಸುವ ವೇಳೆ ಅವರು ಈ ಮಾಹಿತಿ ನೀಡಿದ್ದಾರೆ.

ADVERTISEMENT

‘ಭಾರತದ ಒಳಕ್ಕೆ ನುಸುಳುವುದಕ್ಕಾಗಿ ಎಲ್‌ಒಸಿಯಿಂದ ಆ ಕಡೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 300 ಉಗ್ರರು ಕಾಯುತ್ತಿದ್ದಾರೆ. ಚಳಿಗಾಲ ತೀವ್ರವಾಗುವ ಮುನ್ನ ಅವರು ನುಸುಳಲು ಯತ್ನಿಸಲಿದ್ದಾರೆ. ಆದರೆ, ಈ ಯತ್ನವನ್ನು ವಿಫಲ ಮಾಡಲು ಬಿಎಸ್‌ಎಫ್‌ನ ಯೋಧರು ಸಿದ್ಧರಿದ್ದಾರೆ. ಗುರುವಾರದ ದಾಳಿಯ ವೇಳೆಯಲ್ಲೂ ಉಗ್ರರು ನುಸುಳಲು ಯತ್ನಿಸಿದ್ದರು. ಆ ಯತ್ನವನ್ನು ಬಿಎಸ್‌ಎಫ್‌ ಯೋಧರು ವಿಫಲಗೊಳಿಸಿದರು’ ಎಂದು ಅವರು ಹೇಳಿದ್ದಾರೆ.

ಕದನ ವಿರಾಮ ಉಲ್ಲಂಘನೆ: ಲಡಾಖ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲೇ ಪಾಕಿಸ್ತಾನ ಸೇನೆಯು ಎಲ್‌ಒಸಿಯಲ್ಲಿ ಪದೇಪದೇ ಕದನ ವಿರಾಮ ಉಲ್ಲಂಘಿಸಿದೆ. ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸಾವಿರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಮೂಲಗಳು ಹೇಳಿವೆ.

‘ಮಾತುಕತೆ ಸಾಧ್ಯವಿಲ್ಲ’:ಕಾಶ್ಮೀರದ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲುಭಾರತ ಮತ್ತು ಪಾಕಿಸ್ತಾನ ಮುಂದಾಗಬೇಕು ಎಂದು ಜಮ್ಮು-ಕಾಶ್ಮೀರದ ಪಕ್ಷಗಳ ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್’ (ಪಿಎಜಿಡಿ) ನಾಯಕರು ನೀಡಿದ್ದ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

‘ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಚುಂಗ್ರೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.