ಬೆಂಗಳೂರು: ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿದ ಮೂರು ಪುಟ್ಟ ಮಕ್ಕಳು ಪಾಕಿಸ್ತಾನಕ್ಕೆ ಮರಳಲು ಸಾಧ್ಯವಾಗದೇ, ತಮ್ಮ ವೀಸಾ ವಿಸ್ತರಣೆಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಬೀಬಿ ಯಾಮಿನಾ (8), ಮಹಮೂದ್ ಮುದಸ್ಸರ್ (4) ಮತ್ತು ಮಹಮೂದ್ ಯೂಸುಫ್ ಪರ ಅವರ ತಾಯಿ ರಾಂಶ ಜಹಾನ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ರಜಾಕಾಲದ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರು ಮಂಗಳವಾರ ವಿಚಾರಣೆ ನಡೆಸಿದರು.
ಅರ್ಜಿದಾರರ ಪರ ಹೈಕೋರ್ಟ್ ವಕೀಲರಾದ ಕೆ.ಎಸ್.ಗಣೇಶ್ ಮತ್ತು ಎಸ್.ವೈ.ಸುಮಾ ದೀಕ್ಷಿತ್ ಅವರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಕಾರ್ಯದರ್ಶಿ ಮತ್ತು ಮೈಸೂರು ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ?:
ಅರ್ಜಿದಾರ ಮಕ್ಕಳ ತಾಯಿ ರಾಂಶ ಜಹಾನ್ (33) ಭಾರತ–ಪಾಕಿಸ್ತಾನ ಗಡಿಯ ಅಟ್ಟಾರಿಗೆ 2025ರ ಏಪ್ರಿಲ್ 28ರಂದು ತೆರಳಿದ್ದರು. ಇವರನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲು ಮಕ್ಕಳ ತಂದೆಯಾದ ಮುಹಮ್ಮದ್ ಫಾರೂಕ್ ಬಂದಿರಲಿಲ್ಲ. ಸಣ್ಣ ವಯಸ್ಸಿನ ಈ ಮಕ್ಕಳನ್ನು ಸ್ವೀಕರಿಸಲು ಗಡಿಯಲ್ಲಿ ಯಾರೂ ಮುಂದೆ ಬಾರದ ಕಾರಣ ಭಾರತದ ವಲಸೆ ಅಧಿಕಾರಿಗಳು ಇವರೆಲ್ಲರನ್ನೂ ಪುನಃ ಮೈಸೂರಿಗೆ ಕಳುಹಿಸಿದ್ದರು.
ಈ ಹಿನ್ನೆಲೆಯಲ್ಲಿ ಭಾರತೀಯ ನಿವಾಸಿಯಾದ ಮಕ್ಕಳ ತಾಯಿ ರಾಂಶ ಜಹಾನ್, ಮೈಸೂರು ಪೊಲೀಸ್ ಆಯುಕ್ತರು ಮತ್ತು ಎಫ್‌ಆರ್‌ಒ (ವಿದೇಶೀಯರ ನೋಂದಣಿ ಕಚೇರಿ) ಅಧಿಕಾರಿಗೆ ಏಪ್ರಿಲ್ 29ರಂದು ಮನವಿ ಸಲ್ಲಿಸಿ, ‘ನನ್ನ ಮೂವರು ಮಕ್ಕಳಿಗೆ ಮಾನವೀಯ ಮತ್ತು ಅನುಕಂಪದ ನೆಲೆಯಲ್ಲಿ ಹಾಗೂ ನಾನು ನನ್ನ ಪತಿಯಿಂದ ಪ್ರತ್ಯೇಕಗೊಂಡಿರುವ ಆಧಾರದಲ್ಲಿ ನಮಗೆ ದೀರ್ಘಾವಧಿ ವೀಸಾ ಅಥವಾ ವೀಸಾ ವಿಸ್ತರಣೆಗೆ ಅವಕಾಶ ಮಾಡಿಕೊಡಬೇಕು’ ಎಂದು ಕೋರಿದ್ದರು.
ಏತನ್ಮಧ್ಯೆ, ಗಡುವು ಮುಗಿದ ಕಾರಣ ಹೈಕೋರ್ಟ್ ಮೆಟ್ಟಿಲು ತುಳಿದಿರುವ ರಾಂಶ ಜಹಾನ್, ‘ನಮ್ಮ ಕೋರಿಕೆಯನ್ನು ಪರಿಗಣಿಸಲು ಹೈಕೋರ್ಟ್, ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಮತ್ತು ಈ ಕೋರಿಕೆ ಇತ್ಯರ್ಥವಾಗುವತನಕ ಪೊಲೀಸರು ನಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶಿಸಬೇಕು’ ಎಂದು ಕೋರಿ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಪಾಕ್ ಪತಿ:
ರಾಂಶ ಜಹಾನ್ ಅವರು ಬಲೂಚಿಸ್ತಾನದ ಕ್ವೆಟ್ಟಾದ ಖಾಂಧಾರಿ ನಗರದ ಕಾಯಂ ನಿವಾಸಿ ಮುಹಮ್ಮದ್ ಫಾರೂಕ್ ಅವರನ್ನು ಷರಿಯತ್ ಕಾನೂನಿನ ಪ್ರಕಾರ ಮದುವೆಯಾಗಿದ್ದು ಮೂವರು ಮಕ್ಕಳನ್ನು ಪಡೆದಿದ್ದಾರೆ. ಪಾಕಿಸ್ತಾನದ ಪೌರತ್ವ ಪಡೆಯದೆ ಭಾರತದ ಪ್ರಜೆಯಾಗಿಯೇ ಮುಂದುವರಿದಿದ್ದಾರೆ.
ರಾಂಶ ಜಹಾನ್ ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು 2025ರ ಜನವರಿ 4ರಂದು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು ಮತ್ತು 2025ರ ಜೂನ್ 18ರವರೆಗೂ ಇವರಿಗೆ ವೀಸಾ ನೀಡಲಾಗಿದೆ. ರಾಂಶ ಜಹಾನ್ ಸದ್ಯ ಮೈಸೂರಿನ ರಾಜೀವ್ ನಗರದ 2ನೇ ಹಂತದ 15ನೇ ತಿರುವಿನಲ್ಲಿ ವಾಸವಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದ ಬಳಿಕ ಕೇಂದ್ರ ಸರ್ಕಾರವು; ವೀಸಾ ಪಡೆದು ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳಿಗೆ ದೇಶ ತೊರೆಯಲು ಏಪ್ರಿಲ್ 30ರ ಗಡುವು ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.