ADVERTISEMENT

ಪಂಚಮಸಾಲಿ 3ನೇ ಪೀಠ: ಆಲಗೂರ ಗ್ರಾಮದಲ್ಲಿ ಫೆ.13 ರಂದು ಪೀಠಾರೋಹಣಕ್ಕೆ ಸಿದ್ಧತೆ

ಆಲಗೂರ ಗ್ರಾಮದಲ್ಲಿ ಫೆ.13 ರಂದು ಜಗದ್ಗುರು ಪೀಠಾರೋಹಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 20:21 IST
Last Updated 10 ಫೆಬ್ರುವರಿ 2022, 20:21 IST
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಆಲಗೂರ ಗ್ರಾಮದಲ್ಲಿ ವೀರಶೈವ ಪಂಚಮಸಾಲಿ ಜಗದ್ಗುರು ಪೀಠಾರೋಹಣ ಕಾರ್ಯಕ್ರಮ ಫೆ.13ರಂದು ನಡೆಯಲಿದ್ದು ಗುರುವಾರ ವಿವಿಧ ಸ್ವಾಮೀಜಿಗಳು, ಮುಖಂಡರು ಸ್ಥಳ ಪರಿಶೀಲನೆ ಮಾಡಿದರು
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಆಲಗೂರ ಗ್ರಾಮದಲ್ಲಿ ವೀರಶೈವ ಪಂಚಮಸಾಲಿ ಜಗದ್ಗುರು ಪೀಠಾರೋಹಣ ಕಾರ್ಯಕ್ರಮ ಫೆ.13ರಂದು ನಡೆಯಲಿದ್ದು ಗುರುವಾರ ವಿವಿಧ ಸ್ವಾಮೀಜಿಗಳು, ಮುಖಂಡರು ಸ್ಥಳ ಪರಿಶೀಲನೆ ಮಾಡಿದರು   

ಜಮಖಂಡಿ (ಬಾಗಲಕೋಟೆ ಜಿಲ್ಲೆ): ಕೃಷ್ಣಾ ನದಿ ತೀರದ ಆಲಗೂರ ಗ್ರಾಮದಲ್ಲಿ ಪಂಚಮಸಾಲಿ ಮೂರನೇ ಪೀಠಾರೋಹಣ ಕಾರ್ಯಕ್ರಮದ ಸಿದ್ಧತೆ ಜೋರಾಗಿದ್ದು, ಇದೇ 13 ರಂದು ಬೆಳಿಗ್ಗೆ 10ಕ್ಕೆ ಜಗದ್ಗುರು ಪೀಠಾರೋಹಣ, ಧರ್ಮ ಸಮ್ಮೇಳನ ಮತ್ತು ರೈತ ಸಮಾವೇಶ ಕಾರ್ಯಕ್ರಮ ಜರುಗಲಿದೆ.

ವೀರಶೈವ ಪಂಚಮಸಾಲಿ ಜಗದ್ಗುರು ಪೀಠ, ಆಲಗೂರ-ಜಮಖಂಡಿಯ ಭಾವಿ ಪೀಠಾಧಿಕಾರಿ ಡಾ.ಮಹಾದೇವ ಶಿವಾಚಾರ್ಯ ಶ್ರೀಗಳು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಈಗ ಇರುವ ಎರಡು ಪಂಚಮಸಾಲಿ ಪೀಠಗಳು ಬಾಕಿ ಉಳಿಸಿರುವ ಇನ್ನು ಹಲವಾರು ಕಾರ್ಯಗಳನ್ನು ಪೂರ್ಣಗೊಳಿಸಲು ಮೂರನೇ ಪೀಠವನ್ನು ಸ್ಥಾಪನೆ ಮಾಡಲಾಗುತ್ತಿದೆ. ಮಕ್ಕಳಿಗೆ ಧರ್ಮ ಸಂಸ್ಕಾರ ನೀಡುವುದು, ರೈತರ ಬೆನ್ನೆಲುಬಾಗಿ ನಿಲ್ಲುವುದು ಸೇರಿದಂತೆ ವಿವಿಧ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ’ ಎಂದರು.

‘ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಶ್ರೀಗಳು ಭಾಗವಹಿಸಲಿದ್ದಾರೆ. ರಾಜ್ಯದ ಸಚಿವರು, ಶಾಸಕರು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ. ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ. 4 ಎಕರೆ ಜಾಗದಲ್ಲಿ ಶಾಮಿಯಾನ ಹಾಕಲಾಗಿದ್ದು, ಎರಡು ಎಕರೆ ಸ್ಥಳದಲ್ಲಿ ಪಾರ್ಕಿಂಗ್ ಹಾಗೂ ಎರಡು ಎಕರೆ ಸ್ಥಳದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ADVERTISEMENT

ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಮನಗೂಳಿ ಸಂಗನಬಸವ ಶ್ರೀಗಳು ಮಾತನಾಡಿ, ‘ನಮ್ಮ ಒಕ್ಕೂಟದಲ್ಲಿ 70-80 ಶ್ರೀಗಳು ವಿವಿಧ ಪರಂಪರೆಯನ್ನು ಹೊಂದಿದವರಿದ್ದಾರೆ. ಅವರ ಅನುಭವನ್ನು ತೆಗೆದುಕೊಂಡು ಮೂರನೇ ಪೀಠ ರಚನೆ ಮಾಡಲಾಗುತ್ತಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳನ್ನು ಆಹ್ವಾನಿಸುತ್ತಿದ್ದೇವೆ. ಈ ಪೀಠ ಯಾರ ಪರವೂ ಅಲ್ಲ,ವಿರುದ್ಧವೂ ಅಲ್ಲ’ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಸಂಗಮೇಶ ನಿರಾಣಿ ಮಾತನಾಡಿ, ‘ಹತ್ತು ಹಲವು ಧ್ಯೇಯಗಳೊಂದಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಾಗುತ್ತಿದೆ. ಅದಕ್ಕೆ ನಾವು ಬೆಂಬಲವನ್ನು ಸೂಚಿಸಿದ್ದೇವೆ’ ಎಂದರು.

ಮೂರನೇ ಪೀಠದ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ, ‘ಇದು ನಿರಾಣಿ ಪೀಠ’, ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂಬ ಮಾತಿಗೆ ಉತ್ತರಿಸಿದ ಅವರು, ‘ಸ್ವಾಮಿಜೀಗಳನ್ನು, ಪೀಠವನ್ನು ನಮ್ಮ ಸ್ವಂತಕ್ಕಾಗಲಿ, ರಾಜಕೀಯಕ್ಕಾಗಲಿ ಬಳಸಿಕೊಂಡಿಲ್ಲ, ಯತ್ನಾಳ ಕುಡಿದ ನಶೆಯಲ್ಲಿ ಮಾತನಾಡುತ್ತಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ನಾವು ಸಣ್ಣವರಾಗುವುದಿಲ್ಲ’ ಎಂದರು. ಬೆಂಡವಾಡ ರೇವಣಸಿದ್ಧೇಶ್ವರ ಶ್ರೀಗಳು, ಆಲಗೂರ ಧರಿದೇವರ ಶ್ರೀಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.