ADVERTISEMENT

ಯುಪಿಸಿಎಲ್‌ಗೆ ₹ 1,600 ಕೋಟಿ ಪಾವತಿಸಿ

ಎರಡು ತಿಂಗಳಲ್ಲಿ ನೀಡಲು ಎಸ್ಕಾಂಗೆ ಸಿಇಆರ್‌ಸಿ ತಾಕೀತು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 20:47 IST
Last Updated 17 ನವೆಂಬರ್ 2019, 20:47 IST
ಯುಪಿಸಿಎಲ್ (ಸಂಗ್ರಹ ಚಿತ್ರ)
ಯುಪಿಸಿಎಲ್ (ಸಂಗ್ರಹ ಚಿತ್ರ)   

ಬೆಂಗಳೂರು: ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಅದಾನಿ ಒಡೆತನದ ಉಡುಪಿ ವಿದ್ಯುತ್ ಕಂಪನಿಗೆ (ಯುಪಿಸಿಎಲ್‌) ಎರಡು ತಿಂಗಳೊಳಗೆ ₹ 1,600 ಕೋಟಿ ಬಾಕಿಯನ್ನು ಪಾವತಿಸಬೇಕು ಎಂದು ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ) ತಾಕೀತು ಮಾಡಿದೆ.

ವಿದ್ಯುತ್‌ ದರ ನಿಗದಿಪಡಿಸಿದ ವೇಳೆ ತಿಳಿಸಿದಂತೆ ವಿಳಂಬವಾಗಿ ಪಾವತಿ ಮಾಡಿದ್ದಕ್ಕೆ ವಿಧಿಸುವ ದಂಡ ಶುಲ್ಕ ಸೇರಿಸಿ ಬಾಕಿ ಪಾವತಿ ಮಾಡಬೇಕು ಎಂದೂ ಸೂಚಿಸಲಾಗಿದೆ. ಎಸ್ಕಾಂಗಳು ವಿಳಂಬವಾಗಿ ಹಣ ಪಾವತಿ ಮಾಡುತ್ತಿರುವುದರ ವಿರುದ್ಧ ಯುಪಿಸಿಎಲ್‌ ಕಳೆದ ವರ್ಷ ಸಿಇಆರ್‌ಸಿ ಮೊರೆ ಹೋಗಿತ್ತು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್‌) ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳಿಂದ ವಿದ್ಯುತ್ ಖರೀದಿಸಿ ಕೊಡುವುದು ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್‌ (ಪಿಸಿಕೆಎಲ್‌). ಎಸ್ಕಾಂಗಳ ಹಣಕಾಸು ಅಶಿಸ್ತು ಮತ್ತು ಕಾನೂನು ಪರಿಣತಿಯ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಪಿಸಿಕೆಎಲ್‌ನ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ವಿಳಂಬಕ್ಕೆ ಕಾರಣ: ರೈತರಿಗೆ ಪೂರೈಸುವ ಸಬ್ಸಿಡಿ ವಿದ್ಯುತ್‌ಗೆ ಸರ್ಕಾರ ಹಣ ಪೂರೈಸುವಲ್ಲಿ ವಿಳಂಬ ಮಾಡುವುದು, ಎಸ್ಕಾಂಗಳು ಗ್ರಾಹಕರಿಂದ ವಿದ್ಯುತ್ ಬಿಲ್ ರೂಪದಲ್ಲಿ ಬಂದ ದುಡ್ಡನ್ನು ಬಾಕಿ ಪಾವತಿಗೆ ಬಳಸುವ ಬದಲಿಗೆ ತಮ್ಮದೇ ಸ್ವಂತ ದುಡ್ಡಿನ ರೀತಿಯಲ್ಲಿ ಹೊಸ ಕಾಮಗಾರಿಗಳಿಗೆ ಬಳಸಿದ್ದರಿಂದ ಈ ರೀತಿಯ ಪಾವತಿ ವಿಳಂಬ ಆಗಿದೆ ಎಂದು ಹೇಳಲಾಗಿದೆ.

ಹುಬ್ಬಳ್ಳಿ, ಮೈಸೂರು ಮತ್ತು ಕಲಬುರ್ಗಿಯ ವಿದ್ಯುತ್ ಸರಬರಾಜು ಕಂಪನಿಗಳಿಂದ ₹ 2,600 ಕೋಟಿ
ಯಷ್ಟು ಬಾಕಿ ಇದೆ. ಈ ಪೈಕಿ ಕಲಬುರ್ಗಿ ಕಂಪನಿಯೊಂದೇ ₹ 900 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ. ಬೆಸ್ಕಾಂ ಮತ್ತು ಮೆಸ್ಕಾಂಗಳು ತಕ್ಕಮಟ್ಟಿಗೆ ಹೆಚ್ಚು ಬಾಕಿ ಉಳಿಸಿಕೊಳ್ಳದೆ ಒಂದಿಷ್ಟು ಹಣಕಾಸು ಶಿಸ್ತನ್ನು ಪಾಲಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.