ADVERTISEMENT

ಫೋನ್ ಮೂಲಕ ಪಿಂಚಣಿ: ಕಂದಾಯ ಸಚಿವ ಆರ್.ಅಶೋಕ

ವಾಸ್ತವ್ಯ ಮಾಡಿದ ಗ್ರಾಮದ ಅಭಿವೃದ್ಧಿಗೆ ₹1 ಕೋಟಿ ವಿಶೇಷ ಅನುದಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 17:43 IST
Last Updated 15 ಏಪ್ರಿಲ್ 2022, 17:43 IST
ಅಂಕೋಲಾ ತಾಲ್ಲೂಕಿನ ಅಚವೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಗ್ರಾಮ ವಾಸ್ತವ್ಯದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ್, ಸಮೀಪದ ಅಂಗಡಿಬೈಲ್‌ನಲ್ಲಿ ಸಿದ್ದಿ ಕಾಲೊನಿಗೆ ಭೇಟಿ ನೀಡಿ ಕೃಷಿ ಚಟುವಟಿಕೆ ವೀಕ್ಷಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ ಇದ್ದಾರೆ   –ಪ್ರಜಾವಾಣಿ ಚಿತ್ರ
ಅಂಕೋಲಾ ತಾಲ್ಲೂಕಿನ ಅಚವೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಗ್ರಾಮ ವಾಸ್ತವ್ಯದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ್, ಸಮೀಪದ ಅಂಗಡಿಬೈಲ್‌ನಲ್ಲಿ ಸಿದ್ದಿ ಕಾಲೊನಿಗೆ ಭೇಟಿ ನೀಡಿ ಕೃಷಿ ಚಟುವಟಿಕೆ ವೀಕ್ಷಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ ಇದ್ದಾರೆ   –ಪ್ರಜಾವಾಣಿ ಚಿತ್ರ   

ಅಚವೆ (ಕಾರವಾರ): 'ಫೋನ್ ಮೂಲಕ ಪಿಂಚಣಿಯನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯಕ್ರಮವನ್ನು 10 ದಿನಗಳಲ್ಲಿ ಉದ್ಘಾಟಿಸಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ 'ಕಂದಾಯ ಸಚಿವರ ಗ್ರಾಮ ವಾಸ್ತವ್ಯ' ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇದಕ್ಕಾಗಿ ನಾಲ್ಕು ಅಂಕಿಗಳ ಟೋಲ್‌ ಫ್ರೀ ನಂಬರ್‌ ನೀಡಲಾಗುವುದು. ಅದಕ್ಕೊಂದು ನಿಯಂತ್ರಣ ಕೊಠಡಿ ರಚಿಸಲಾಗುವುದು. ಫಲಾನುಭವಿಗಳು ಅದಕ್ಕೆ ಕರೆ ಮಾಡಿ ತಮ್ಮ ಹೆಸರು, ಆಧಾರ್‌ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ನಂಬರ್ ತಿಳಿಸಿದರೆ ಸಾಕು. 10 ನಿಮಿಷದಲ್ಲಿ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಿಗರಿಗೆ ಏಕಕಾಲದಲ್ಲಿ ಮಾಹಿತಿ ರವಾನೆ ಆಗುತ್ತದೆ. ಅದಾಗಿ 72 ಗಂಟೆಗಳ ಒಳಗೆ ಕಂದಾಯ ಸಿಬ್ಬಂದಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ಮಾಡಿ ಪ್ರಮಾಣ ಪತ್ರ ವಿತರಿಸುತ್ತಾರೆ. ಬಳಿಕ ಅವರಿಗೆ ಪಿಂಚಣಿ ವಿತರಣೆ ಮಾಡಲಾಗುವುದು. ಜನರಿದ್ದಲ್ಲೇ ಸರ್ಕಾರ, ಜನರದ್ದೇ ಸರ್ಕಾರ ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡಲಾಗುತ್ತಿದೆ' ಎಂದರು.

ADVERTISEMENT

'ಕೆಲವು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದ ಸಂದರ್ಭ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿದ ದೂರುಗಳಿವೆ. ಈ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹಾಗೆ
ಮಾಡದಂತೆ ಸೂಚಿಸಲಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ಅವರು ಸರ್ಕಾರಿ ಶಾಲೆ, ಸರ್ಕಾರಿ ವಸತಿ ನಿಲಯಗಳಲ್ಲೇ ವಾಸ್ತವ್ಯ ಮಾಡುವಂತೆ ಸೂಚಿಸಲಾಗಿದೆ' ಎಂದರು.

ವಿಶೇಷ ಅನುದಾನ: 'ಅಚವೆಯಲ್ಲಿ ನನ್ನ ಗ್ರಾಮ ವಾಸ್ತವ್ಯ ಸೇರಿ ಆರನೆಯದು. ನಾನು ವಾಸ್ತವ್ಯ ಹೂಡಿದ ಗ್ರಾಮಗಳ ಅಭಿವೃದ್ಧಿಗೆ ಇಲಾಖೆಯಿಂದ ₹1 ಕೋಟಿ ವಿಶೇಷ ಅನುದಾನ ನೀಡಲಾಗುವುದು. ಆ ಊರಿನ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ' ಎಂದು ತಿಳಿಸಿದರು.

‘ಹಿಂದಿನ ಮೂರು ಗ್ರಾಮ ವಾಸ್ತವ್ಯಗಳಲ್ಲಿ 90 ಸಾವಿರ ಅರ್ಜಿಗಳು ಬಂದಿವೆ. ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಅಧಿಕಾರಿಗಳೇ ಗ್ರಾಮಕ್ಕೆ ಹೋಗುವುದರಿಂದ ಜನರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.