ADVERTISEMENT

ರೈತರ ರಕ್ಷಣೆಗೆ ಮುಲಾಮು

ಅಪಾಯಕಾರಿ ಕೀಟನಾಶಕಗಳಿಂದಾಗುವ ಹಾನಿ ತಡೆಗೆ ಉ‍‍‍ಪಯುಕ್ತ

ಎಸ್.ರವಿಪ್ರಕಾಶ್
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST
ನಿಲುವಂಗಿಯೊಂದಿಗೆ ಖೇತನ್ ಥೋರಟ್‌
ನಿಲುವಂಗಿಯೊಂದಿಗೆ ಖೇತನ್ ಥೋರಟ್‌   

ಬೆಂಗಳೂರು: ಬೆಳೆಗಳನ್ನು ಬಾಧಿಸುವ ಕೀಟಗಳ ನಾಶಕ್ಕೆ ಅಪಾಯಕಾರಿ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ತಮ್ಮನ್ನೇ ಅಪಾಯಕ್ಕೆ ಒಡ್ಡಿಕೊಳ್ಳುವ ರೈತರ ರಕ್ಷಣೆಗಾಗಿ ವಿಜ್ಞಾನಿಗಳು ಮುಲಾಮು ಮತ್ತುವಿಶೇಷ ನಿಲುವಂಗಿ ಅಭಿವೃದ್ಧಿಪಡಿಸಿದ್ದಾರೆ.

ಮುಲಾಮು ಮತ್ತು ನಿಲುವಂಗಿ ಎರಡೂ ರೈತರಿಗೆ ಕೀಟ ನಾಶಕಗಳ ಅಪಾಯ ಮತ್ತು ಅಡ್ಡ ಪರಿಣಾಮಗಳಿಂದ ಸಂಪೂರ್ಣ ರಕ್ಷಣೆ ನೀಡುತ್ತವೆ ಎಂದು ನಗರದ ‘ಇನ್ಸ್‌ಟಿಟ್ಯೂಟ್‌ ಫಾರ್ ಸ್ಟೆಮ್‌ ಸೆಲ್‌ ಸೈನ್ಸ್‌’ನ ವಿಜ್ಞಾನಿ ಡಾ.ಪ್ರವೀಣ್‌ ಕುಮಾರ್‌ ವೆಮುಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ‘ಕೃಷಿ ಮೇಳ’ದಲ್ಲಿ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಮುಲಾಮು ಮತ್ತು ನಿಲುವಂಗಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರದರ್ಶನವು ನ. 18ರವರೆಗೆ ಇರಲಿದೆ.

ADVERTISEMENT

ಕೀಟ ನಾಶಕಗಳ ವಿಷದಿಂದ ರೈತರು ಅನಾರೋಗ್ಯಕ್ಕೆ ತುತ್ತಾಗುವುದರಿಂದ ಮುಲಾಮು ಶೇ 100 ರಷ್ಟು ರಕ್ಷಣೆ ನೀಡುತ್ತದೆ. ದೇಶದಲ್ಲಿ ರೈತರು ಹಲವು ದಶಕಗಳಿಂದ ಕೀಟನಾಶಕಗಳ ವಿಷಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಕ್ಯಾನ್ಸರ್‌ ಸೇರಿ ವಿವಿಧ ಬಗೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಾಕಷ್ಟು ರೈತರು ಸಾವಿಗೀಡಾಗಿದ್ದಾರೆ. ಹೊಸ ಮುಲಾಮು ಅವರಿಗೆ ಪರಿಹಾರವಾಗಬಲ್ಲದು ಎಂದರು.

‘ಕೀಟನಾಶಕಗಳಲ್ಲಿ ‘ಆರ್ಗನೋಫಾಸ್ಫೇಟ್‌’ ವರ್ಗಕ್ಕೆ ಸೇರಿದ ಕೀಟನಾಶಕಗಳು ಅತ್ಯಂತ ಸುಲಭವಾಗಿ ಚರ್ಮ ಮತ್ತು ಉಸಿರಾಟದ ಮೂಲಕ ದೇಹದೊಳಗೆ ಸೇರುತ್ತವೆ. ಹೀಗಾಗಿ ಕೀಟನಾಶಕಗಳನ್ನು ಸಿಂಪಡಿಸುವಾಗ ಪರಿಣಾಮ ಕಡಿಮೆ ಮಾಡುವ ಉದ್ದೇಶದಿಂದ ಕೈಗವುಸು, ಮಾಸ್ಕ್‌ ಮತ್ತು ಬೂಟುಗಳನ್ನು ತೊಡಲು ಸೂಚಿಸಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಈ ಸಾಧನಗಳು ಬಡ ರೈತರಿಗೆ ದುಬಾರಿಯೇ ಆಗಿವೆ. ಉಷ್ಣ ವಲಯದಂತಹ ನಮ್ಮ ದೇಶಕ್ಕೆ ಅಷ್ಟಾಗಿ ಹೊಂದುವುದಿಲ್ಲ. ಆದ್ದರಿಂದ ಮುಖಕ್ಕೆ ಟವೆಲ್ ಮುಚ್ಚಿಕೊಂಡು ಸಿಂಪಡಿಸುತ್ತಾರೆ’ ಎಂದು ಅವರು ವಿವರಿಸಿದರು.

‘ಆರ್ಗನೋಫಾಸ್ಫೇಟ್‌ ದೇಹದೊಳಗೆ ತೂರುವುದನ್ನು ತಡೆಯುವ ಮುಲಾಮು ಅಭಿವೃದ್ಧಿಪಡಿಸುವ ಪ್ರಯತ್ನಗಳು ಈ ಹಿಂದೆಯೂ ನಡೆದಿದ್ದವು. ಆದರೆ, ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ನಾವು ಅಭಿವೃದ್ಧಿಪಡಿಸಿರುವ ಮುಲಾಮು ಆರ್ಗನೋಫಾಸ್ಫೇಟ್‌ ದೇಹಕ್ಕೆ ಪ್ರವೇಶಿಸುವ ಮುನ್ನವೇ ನಿಷ್ಕ್ರಿಯಗೊಳಿಸುತ್ತದೆ. ಈ ಮುಲಾಮಿಗೆ ಪಾಲಿ–ಆಕ್ಸಿಮೆ ಎಂಬ ರಾಸಾಯನಿಕವನ್ನು ಪ್ರಧಾನವಾಗಿ ಬಳಸಲಾಗಿದೆ. ಈ ರಾಸಾಯನಿಕವನ್ನು ಆಯ್ಕೆ ಮಾಡಿಕೊಳ್ಳಲು ಎರಡು ಮುಖ್ಯ ಕಾರಣಗಳಿವೆ; ಮೊದಲನೇ ಕಾರಣ, ವಿಷವನ್ನು ನಿಷ್ಕ್ರಿಯಗೊಳಿಸುವುದರ ಜತೆಗೆ ಉಷ್ಣವಲಯ ಮತ್ತು ಶೀತವಲಯ ಹೀಗೆ ಎರಡೂ ಕಡೆಗಳಲ್ಲಿ ಪಾಲಿ–ಆಕ್ಸಿಮೆ ದೃಢವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಅವರು.

**

ರೈತ ರಕ್ಷಕ ನಿಲುವಂಗಿ

ಕೀಟನಾಶಕಗಳ ವಿಷದಿಂದ ರಕ್ಷಣೆ ನೀಡುವ ನಿಲುವಂಗಿಯನ್ನೂ ಅಭಿವದ್ಧಿಪಡಿಸಲಾಗಿದೆ. ಇದು ಅಡಿಯಿಂದ ಮುಡಿವರೆಗೆ ರಕ್ಷಣೆ ನೀಡುತ್ತದೆ ಎಂದು ಸಂಶೋಧಕರ ತಂಡದ ಸದಸ್ಯ ಖೇತನ್ ಥೋರಟ್‌ ತಿಳಿಸಿದರು.

ಈ ನಿಲುವಂಗಿಯೇ ವಿಷ ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಹತ್ತಿ ಬಟ್ಟೆಯನ್ನು ಬಳಸಲಾಗಿದೆ. ನಿಲುವಂಗಿಗೆ ವಿಷ ನಿವಾರಕ ರಾಸಾಯನಿಕವನ್ನು ಲೇಪಿಸಲಾಗಿರುತ್ತದೆ ಎಂದು ಹೇಳಿದರು.

ಒಂದು ನಿಲುವಂಗಿಯನ್ನು ಐದು ವರ್ಷಗಳ ಕಾಲ ಬಳಸಬಹುದು. ಇತರ ಬಟ್ಟೆಗಳಂತೇ ನಿತ್ಯವೂ ಸ್ವಚ್ಛ ಮಾಡಿ ಬಳಸಬಹುದು. ರೈತರು ಆರಾಮವಾಗಿ ಬಳಸಬಹುದು ಎಂದು ಖೇತನ್‌ ಹೇಳಿದರು.
**

ಮುಖ್ಯಾಂಶಗಳು
ಇಲಿಗಳ ಮೇಲೆ ಮುಲಾಮು ಪ್ರಯೋಗ ಯಶಸ್ವಿ

ಮಾನವರ ಮೇಲೆ ಕ್ಲಿನಿಕಲ್‌ ಪ್ರಯೋಗವೂ ನಡೆದಿದೆ

ಮಾನವರ ಬಳಕೆಗೆ ಸಿದ್ಧವಿರುವ ಮುಲಾಮು ಲಭ್ಯವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.