ADVERTISEMENT

ಜನರಿಗೆ ಬರೆ ಹಾಕಿದ ಮೈತ್ರಿ ಸರ್ಕಾರ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 19:35 IST
Last Updated 5 ಜನವರಿ 2019, 19:35 IST

ಬೆಂಗಳೂರು: ಎರಡು ತಿಂಗಳಿನಿಂದ ಇಳಿಮುಖವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಏಕಾಏಕಿ ಏರಿಸುವ ಮೂಲಕ ಜನರಿಗೆ ಬರೆ ಹಾಕಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಟೀಕಿಸಿದ್ದಾರೆ.

ಇಂಧನ ದರ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ವಾಗ್ದಾಳಿ ನಡೆಸಿತ್ತು. ಇಂಧನ ದರ ಏರಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಹೇಳಿದ್ದ ಸರ್ಕಾರ ಶೇ 2ರಷ್ಟು ತೆರಿಗೆಯನ್ನೂ ಇಳಿಸಿತ್ತು. ಈಗ ಪುನಃ ತೆರಿಗೆ ಹೊರೆ ಹಾಕಿರುವುದನ್ನು ನೋಡಿದರೆ ಸಮ್ಮಿಶ್ರ ಸರ್ಕಾರ ಜನರ ಎದುರು ನಾಟಕವಾಡುತ್ತಿರುವುದು ಬಯಲಾದಂತಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ದೂರಿದರು.

ಇಂಧನ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ದೂಷಿಸಿದ್ದ ಕಾಂಗ್ರೆಸ್ ನಾಯಕರು ಭಾರತ್ ಬಂದ್ ನಡೆಸಿದ್ದರು. ಈಗ ಅವರ ಪಾಲುದಾರಿಕೆಯಲ್ಲ ನಡೆಯುತ್ತಿರುವ ಸರ್ಕಾರವೇ ದರ ಏರಿಸಿದ್ದರಿಂದಾಗಿ ಕಾಂಗ್ರೆಸ್ ನಾಯಕರ ಬಾಯಿ ಬಂದ್ ಆಗಿದೆ. ಮುಖ್ಯಮಂತ್ರಿಯವರ ತೀರ್ಮಾನವನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ ಎಂಬುದನ್ನು ಆ ಪಕ್ಷದ ನಾಯಕರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ದರ ಏರಿಕೆ ನಿರ್ಧಾರವನ್ನು ಖಂಡಿಸಿ ಇದೇ 6ರ ಭಾನುವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.