ADVERTISEMENT

ಕಣ್ಣಿಗೆ ಬೀಳದ ‘ನೀಲ ಕುರಿಂಜಿ’; ನಿರಾಸೆ

ಚಂದ್ರದ್ರೋಣ ಪರ್ವತ ಶ್ರೇಣಿ; ಪ್ರವಾಸಿಗರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:02 IST
Last Updated 19 ಅಕ್ಟೋಬರ್ 2018, 19:02 IST
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫಲಕ ಚಿತ್ರ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫಲಕ ಚಿತ್ರ   

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯು ‘ನೀಲ ಕುರಿಂಜಿ’ ಹೂವುಗಳಿಂದ ಕಂಗೊಳಿಸುತ್ತಿದೆ ಎಂಬ ಚಿತ್ರ, ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಗಿರಿಸಾಲಿನಲ್ಲಿ ಒಂದೆರಡು ಕಡೆ ಕಾಣಿಸಿರುವ ಹೂವು ಹುಡುಕುವುದು ಪ್ರವಾಸಿಗರಿಗೆ ಪೀಕಲಾಟವಾಗಿ ಪರಿಣಮಿಸಿದೆ.

12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಈ ಹೂವಿನ ಅಂದ ಕಣ್ತುಂಬಿಕೊಳ್ಳಲು ಗಿರಿಗೆ ದಾಂಗುಡಿ ಇಟ್ಟಿರುವ ಪ್ರವಾಸಿಗರಿಗೆ ಹೂವು ಕಂಡಿಲ್ಲ. ಬೆಟ್ಟದ ವಿವಿಧೆಡೆಗಳಲ್ಲಿ ಹುಡುಕಿದರೂ ಹೂವು ಕಾಣಿಸದಿರುವುದು ನಿರಾಸೆ ಮೂಡಿಸಿದೆ.

‘ಕುರಿಂಜಿ ವೀಕ್ಷಣೆಗಾಗಿ ಬಾಬಾಬುಡನ್‌ಗಿರಿ ಬೆಟ್ಟಕ್ಕೆ ಬನ್ನಿ ಎಂಬ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಫಲಕ’, ‘ಪುಷ್ಪಗಳಿಂದ ನೀಲಾವೃತವಾಗಿರುವ ಗುಡ್ಡ’ದ ಚಿತ್ರಗಳು, ‘ಮಿತ್ರರು, ಕುಟುಂಬದೊಂದಿಗೆ ಚಿಕ್ಕಮಗಳೂರು ಪ್ರವಾಸಕ್ಕೆ ಈ ವಾರಾಂತ್ಯವನ್ನು ಮೀಸಲಿಟ್ಟು ನೀಲಾವೃತ ಬೆಟ್ಟ ನೋಡಿ ಆನಂದಿಸಿ’ ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ (ವ್ಯಾಟ್ಸ್‌ಆ್ಯಪ್‌, ಫೇಸುಬುಕ್‌...) ಹಬ್ಬಿವೆ. ಗಿರಿಶ್ರೇಣಿಯು ವಾಹನ ದಟ್ಟಣೆಯಿಂದ ಗಿಜಿಗಿಡುತ್ತಿದೆ. ಬೆಟ್ಟದಲ್ಲಿ ಹೂವು ಕಾಣಿಸದೆ ಪ್ರವಾಸಿಗರ ಆಸೆ ಕಮರಿದೆ.

ADVERTISEMENT

‘ವ್ಯಾಟ್ಸ್‌ಆ್ಯಪ್‌ನಲ್ಲಿ ‘ಕುರಿಂಜಿ’ ಹೂವಿನ ಚಿತ್ರ ನೋಡಿದೆ, ಅದನ್ನು ನಿಜವಾಗಿಯೂ ನೋಡಬೇಕು ಎಂದು ಗೆಳೆತಿಯರೊಡಗೂಡಿ ಬಾಬಾಬುಡನ್‌ಗಿರಿಗೆ ಬಂದಿದ್ದೆ. ಹೂವು ಕಾಣಿಸಲಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಹಬ್ಬಿಸಿದ್ದಾರೆ’ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಬಿ.ಗಗನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಒಂದು ಕಡೆ ಹೂವು ಕಾಣಿಸಿದೆ. ಕೇರಳ, ತಮಿಳುನಾಡು ಪ್ರದೇಶಗಳಲ್ಲಿನ ಹೂವುಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಹೋಮ್‌ ಸ್ಟೇ, ರೆಸಾರ್ಟ್‌ಗಳವರು ಪ್ರವಾಸಿಗರನ್ನು ಆಕರ್ಷಿಸಲು ಈ ತಂತ್ರ ಮಾಡಿದ್ದಾರೆ’ ಎಂದು ಅರಣ್ಯ ಇಲಾಖೆ ಮಾಜಿ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘2006ರಲ್ಲಿ ಪುಷ್ಪಗಳಿಂದ ಬೆಟ್ಟ ನೀಲಿಯಾಗಿತ್ತು. ಈ ವರ್ಷ ಹೂವು ಅರಳಿಲ್ಲ. ಪ್ರವಾಸೋದ್ಯಮ ಉತ್ತೇಜಿಸಲು ಕೆಲವರು ಸಾಮಾಜಿಕ ತಾಣಗಳಲ್ಲಿ ಈ ತಂತ್ರ ಮಾಡಿದ್ದಾರೆ. ವಿಜಯ ದಶಮಿಯಂದು ಒಂದೂವರೆ ಸಾವಿರಕ್ಕೂ ಹೆಚ್ಚು ವಾಹನಗಳು ಗಿರಿಗೆ ಸಂಚರಿಸಿವೆ. ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಟ್ರಸ್ಟಿ ಡಿ.ವಿ.ಗಿರೀಶ್‌ ಹೇಳುತ್ತಾರೆ.

ಏನಿದು ಕುರಿಂಜಿ?

ನೀಲ ಕುರಿಂಜಿ (strobilanthus kunthiana-ಸ್ಟ್ರೊಬಿಲಾಂಥಸ್‌ ಕುಂತಿಯಾನ) ಹೂವು 12 ವರ್ಷಗಳಿಗೊಮ್ಮೆ ಅರಳುತ್ತದೆ. ಇದು ನಿಸರ್ಗದ ವಿಸ್ಮಯ.

ಬಾಬಾಬುಡನ್‌ಗಿರಿ ಶ್ರೇಣಿ, ಕೇರಳದ ಮುನ್ನಾರ್‌, ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಹೂವು ಕಂಡುಬರುತ್ತದೆ. ಹೂವುಗಳು ಅರಳಿದಾಗ ಇಡೀ ಬೆಟ್ಟವೇ ನೀಲಿಯಾಗಿ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.