ADVERTISEMENT

ರಾಜ್ಯದ ಹೊರಗೆ ಹಂದಿ ಸಾಗಿಸುವಂತಿಲ್ಲ

ಹೈಕೋರ್ಟ್‌ ವಿಭಾಗೀಯ ಪೀಠ ಆದೇಶ

ಬಾಲಕೃಷ್ಣ ಪಿ.ಎಚ್‌
Published 13 ಫೆಬ್ರುವರಿ 2019, 20:15 IST
Last Updated 13 ಫೆಬ್ರುವರಿ 2019, 20:15 IST
ದಾವಣಗೆರೆಯಲ್ಲಿ ತಿಂಗಳುಗಳ ಹಿಂದೆ ಹಂದಿ ಹಿಡಿಯುವ ಕಾರ್ಯಾಚರಣೆ ನಡೆದಿತ್ತು (ಸಂಗ್ರಹ ಚಿತ್ರ)
ದಾವಣಗೆರೆಯಲ್ಲಿ ತಿಂಗಳುಗಳ ಹಿಂದೆ ಹಂದಿ ಹಿಡಿಯುವ ಕಾರ್ಯಾಚರಣೆ ನಡೆದಿತ್ತು (ಸಂಗ್ರಹ ಚಿತ್ರ)   

ದಾವಣಗೆರೆ: ಇನ್ನು ಮುಂದೆ ನಗರ ಪ್ರದೇಶಗಳಲ್ಲಿ ಸ್ವಚ್ಛತೆಯ ಹೆಸರಲ್ಲಿ ಹಂದಿಗಳನ್ನು ಹಿಡಿದು ಹೊರ ರಾಜ್ಯಗಳಿಗೆ ಸಾಗಿಸುವಂತಿಲ್ಲ.

‘ಆಪರೇಷನ್‌ ವರಾಹ’ ಕಾರ್ಯಾಚರಣೆ ನಡೆಸಿ ತಮಿಳುನಾಡಿಗೆ ಹಂದಿ ಸಾಗಿಸುತ್ತಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಕ್ರಮದ ವಿರುದ್ಧ ಹಂದಿ ಮಾಲೀಕರ ಪರವಾಗಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಆರ್ಥಿಕವಾಗಿ ಹಿಂದುಗಳಿದ ಸಮುದಾಯ ಹಂದಿಗಳನ್ನು ಸಾಕಿ ಬದುಕುತ್ತಿದ್ದು, ಈ ಕಾರ್ಯಾಚರಣೆಯಿಂದ ಮತ್ತಷ್ಟು ಆರ್ಥಿಕ ತೊಂದರೆ ಉಂಟಾಗಿದೆ. ಹಂದಿಗಳನ್ನು ಬೇರೆ ರಾಜ್ಯಗಳಿಗೆ ಸಾಗಾಟ ಮಾಡುವುದು ಅಕ್ರಮ' ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ, ನ್ಯಾಯಮೂರ್ತಿ ಪಿ.ಎನ್‌. ದಿನೇಶ್‌ ಕುಮಾರ್‌ ಅವರನ್ನೊಳಗೊಂಡ ಹೈಕೋರ್ಟ್‌ ವಿಭಾಗೀಯ ಪೀಠವು ಈ ಮೇಲ್ಮನವಿಯನ್ನು ಮಾನ್ಯ ಮಾಡಿದೆ.

ADVERTISEMENT

ಮುಂದಿನ ಆದೇಶ ಬರುವವರೆಗೆ ದಾವಣಗೆರೆ ಅಥವಾ ರಾಜ್ಯದ ಯಾವುದೇ ಸ್ಥಳದಿಂದ ಹಂದಿಗಳನ್ನು ಹಿಡಿದು ಹೊರ ರಾಜ್ಯಗಳಿಗೆ ಸಾಗಾಟ ಮಾಡಬಾರದು. ಕೊರಚ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದಲ್ಲದೇ ದಾವಣಗೆರೆ ಪಾಲಿಕೆಯು ನಗರದ ಹೊರಗೆ ಹಂದಿಗಳಿಗೆ ಆಶ್ರಯ ಕಲ್ಪಿಸಬೇಕು ಎಂದು ಪಾಲಿಕೆಗೆ ನೇರ ಸೂಚನೆ ನೀಡಿದೆ.

20 ಸಾವಿರ ಹಂದಿಗಳು: ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 4,000 ಹಂದಿಗಳನ್ನು ತಮಿಳುನಾಡಿನ ಸೇಲಂ, ಮಧುರೈ ಇತರ ಕಡೆಗಳಿಗೆ ಸಾಗಿಸಲಾಗಿತ್ತು. ಇದಾದ ನಂತರ ಹಂದಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿತ್ತು. ಈಗ ಮತ್ತೆ ಹಂದಿ ಸಂಖ್ಯೆ ಜಾಸ್ತಿಯಾಗಿದ್ದು, 20 ಸಾವಿರದಷ್ಟು ಇವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

*ಹಂದಿಗಳನ್ನು ನಗರದ ಹೊರಗೆ ಸಾಗಿಸಿ ಶೆಲ್ಟರ್‌ ಮಾಡುವುದು, ಅಲ್ಲಿ ಸ್ವಚ್ಛತೆ ಕಾಪಾಡುವುದು, ಅದಕ್ಕೆ ಆಹಾರದ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸ. ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲಾಗುವುದು.

- ಮಂಜುನಾಥ ಬಳ್ಳಾರಿ ಆಯುಕ್ತ, ದಾವಣಗೆರೆ ಮಹಾನಗರ ಪಾಲಿಕೆ

* ಆಲೂರಹಟ್ಟಿ, ಬಾತಿಕೆರೆ, ಆನಗೋಡು, ಆವರಗೊಳ್ಳ ಮತ್ತಿತರ ಕಡೆಗಳಲ್ಲಿ ಹಂದಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಹಿಂದೆ ಪ್ರಯತ್ನಿಸಲಾಗಿತ್ತು. ನಗರದ ಹೊರಗೆ ನಮಗೆ ಬೇಡ ಎಂದು ಅಲ್ಲೆಲ್ಲ ವಿರೋಧ ಬಂದಿತ್ತು. ಹೊಸ ಜಾಗ ಹುಡುಕಲಾಗುವುದು.

- ಡಾ.ಚಂದ್ರಶೇಖರ ಸುಂಕದ, ಪಾಲಿಕೆ ಪ್ರಭಾರ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.