ADVERTISEMENT

ಮೀನುಗಾರಿಕೆ ದೋಣಿಗಳಿಗೆ ದೇಶೀಯ ಎಂಜಿನ್‌

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 16:38 IST
Last Updated 8 ಜನವರಿ 2021, 16:38 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಬೆಂಗಳೂರು: ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ ಚೀನಾ ನಿರ್ಮಿತ ಎಂಜಿನ್‌ಗಳ ಬದಲಿಗೆ ದೇಶೀಯವಾಗಿ ನಿರ್ಮಿಸಿದ ಎಂಜಿನ್‌ಗಳ ಬಳಕೆಗೆ ಯೋಜನೆ ರೂಪಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

‘ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ ಮೀನುಗಾರಿಕಾ ದೋಣಿಗಳಿಗೆ ಸ್ವದೇಶಿ ಎಂಜಿನ್‌ ತಯಾರಿಸುವ ಕುರಿತು ಮೀನುಗಾರರ ಸಂಘಟನೆಗಳ ಮುಖಂಡರು, ವಿವಿಧ ಕಂಪನಿಗಳ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈಗ ಮೀನುಗಾರಿಕಾ ದೋಣಿಗಳಿಗೆ ಶೇ 90ರಷ್ಟು ಚೀನಾ ನಿರ್ಮಿತ ಎಂಜಿನ್‌ಗಳನ್ನೇ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ವದೇಶಿ ಎಂಜಿನ್‌ಗಳನ್ನು ತಯಾರಿಸಿ ಬಳಸುವ ಕುರಿತು ಚರ್ಚೆ ನಡೆಸಲಾಗಿದೆ. ಎರಡರಿಂದ ಮೂರು ತಿಂಗಳಲ್ಲಿ ಸ್ವದೇಶಿ ನಿರ್ಮಿತ ಮೀನುಗಾರಿಕಾ ದೋಣಿಗಳ ಎಂಜಿನ್‌ಗಳ ಪ್ರದರ್ಶನವನ್ನು ಕರಾವಳಿ ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು ಎಂದರು.

ADVERTISEMENT

ಪ್ರಸ್ತುತ ಚೀನಾದಲ್ಲಿ ಉತ್ಪಾದಿಸುವ ಎಂಜಿನ್‌ಗಳ ಗುಣಮಟ್ಟಕ್ಕೆ ಸರಿದೂಗುವ ದೇಶೀಯ ಎಂಜಿನ್‌ಗಳು ಲಭ್ಯವಿಲ್ಲ. ದೋಣಿಗಳಲ್ಲಿ ಬಳಸುವ ಎಂಜಿನ್‌ಗಳ ಗುಣಮಟ್ಟ ಸುಧಾರಣೆಗೆ ಕಾಲಾವಕಾಶ ನೀಡಲಾಗುವುದು. ಆ ಬಳಿಕ ಭಾರತದಲ್ಲಿ ನಿರ್ಮಿಸಿದ ಎಂಜಿನ್‌ಗಳ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಡಲಿನಲ್ಲಿ ತೊಂದರೆಗೆ ಸಿಲುಕುವ ಮೀನುಗಾರರ ರಕ್ಷಣೆಗಾಗಿ ‘ಬೋಟ್‌ ಆಂಬುಲೆನ್ಸ್‌’ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ‘ಬೋಟ್ ಆಂಬುಲೆನ್ಸ್‌’ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು

ವರಮಾನ ಕುಸಿತ: ಕೋವಿಡ್‌ ಕಾರಣದಿಂದ ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನಗಳ ವರಮಾನದಲ್ಲಿ ಶೇ 50ರಷ್ಟು ಕುಸಿತವಾಗಿದೆ. ಇತ್ತೀಚಿನ ದಿನಗಳಲ್ಲಿ ತುಸು ಚೇತರಿಕೆ ಕಂಡುಬಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.