ADVERTISEMENT

ಉಮೇಶ್‌ ಕತ್ತಿ ನಿಧನದಿಂದ ನೋವಾಗಿದೆ: ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2022, 6:23 IST
Last Updated 7 ಸೆಪ್ಟೆಂಬರ್ 2022, 6:23 IST
ಉಮೇಶ್ ಕತ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಉಮೇಶ್ ಕತ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ವಿ. ಕತ್ತಿ (62) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಉಮೇಶ್‌ ಕತ್ತಿ ಅವರ ನಿಧನದಿಂದ ಬಹಳ ನೋವಾಗಿದೆ ಎಂದು ಮೋದಿ ಹೇಳಿದ್ದಾರೆ.

‘ಉಮೇಶ್ ಕತ್ತಿ ಅನುಭವೀ ನಾಯಕ. ಕರ್ನಾಟಕದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಅವರ ಅಗಲುವಿಕೆಯಿಂದ ನೋವಾಗಿದೆ. ಈ ದುಃಖದ ಸನ್ನಿವೇಶದಲ್ಲಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೋವು ಸಹಿಸುವ ಶಕ್ತಿ ದೊರೆಯಲೆಂದು ಪ್ರಾರ್ಥನೆ. ಓಂ ಶಾಂತಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಉಮೇಶ್‌ ಕತ್ತಿ ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಅವರು ಅಲ್ಲಿಯೇ ಕುಸಿದುಬಿದ್ದಿದ್ದರು. ಹತ್ತು ನಿಮಿಷಗಳಾದರೂ ಹೊರ ಬರದಿದ್ದಾಗ ಕುಟುಂಬದವರು ಬಾಗಿಲು ತೆರೆದು ಒಳ ಹೋದಾಗ ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಬಳಿಕ ಅವರನ್ನು ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತೀವ್ರನಿಗಾ ಘಟಕದಲ್ಲಿ ಇರಿಸಲಾಗಿತ್ತು. ತಡರಾತ್ರಿ ವೇಳೆಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದವು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ 1961ರ ಮಾರ್ಚ್‌ 14ರಂದು ಜನಿಸಿದ್ದ ಉಮೇಶ್ ಕತ್ತಿ ಅವರು ಬಿ.ಎ. ಪದವಿ ಪಡೆದಿದ್ದರು.

ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಆರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮೂಲತಃ ಜನತಾ ಪರಿವಾರದವರಾದ ಕತ್ತಿ ಅವರು ನಂತರ ಬಿಜೆಪಿ ಸೇರಿದ್ದರು. 1996ರಿಂದ 1999ರವರೆಗೆ ಸಕ್ಕರೆ ಸಚಿವರಾಗಿ, 2008ರಿಂದ ಕೃಷಿ ಸಚಿವರಾಗಿ ಮತ್ತು 2010ರಿಂದ 2013ರವರೆಗೆ ಕೃಷಿ ಸಚಿವರಾಗಿದ್ದರು. 2021ರ ಆಗಸ್ಟ್‌ನಿಂದ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.