ಬೆಂಗಳೂರು: 'ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ಮಾತನಾಡುತ್ತಾ ಆರ್‌ಎಸ್‌ಎಸ್ ಅನ್ನು ಹೊಗಳಿರುವುದು ಸ್ವಾತಂತ್ರ್ಯ ಹೋರಾಟ, ರಾಷ್ಟ್ರಧ‍್ವಜ ಮತ್ತು ಸಂವಿಧಾನದ ನಿಜ ಆಶಯಗಳಿಗೆ ಮಾಡಿರುವ ಅವಮಾನ. ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆದು, ದೇಶದ ಜನರಲ್ಲಿ ಕ್ಷಮೆ ಕೇಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ಹಾಕಿರುವ ಅವರು, ‘ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದೆ ಇದ್ದ, ಇತ್ತೀಚಿನವರೆಗೆ ರಾಷ್ಟ್ರಧ್ವಜವನ್ನು ತಮ್ಮ ಕಚೇರಿಯಲ್ಲಿ ಆರೋಹಣ ಮಾಡದ ಆರ್‌ಎಸ್‌ಎಸ್‌ಗೆ ಅಭಿನಂದನೆ ಸಲ್ಲಿಸುವ ಮೂಲಕ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪವಿತ್ರವಾದ ವೇದಿಕೆಯನ್ನು ತಮ್ಮ ಸ್ಥಾನದ ಮೂಲಕ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ.
ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ 2001ರವರೆಗೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ದಿನ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಧ್ವಜಾರೋಹಣ ಮಾಡಿದ್ದ ತಮ್ಮದೇ ಸಂಘಟನೆಯ ಯುವಕರ ವಿರುದ್ಧ ದೂರು ನೀಡಿ, ಜೈಲಿಗೆ ಕಳುಹಿಸಿದ್ದನ್ನು ದೇಶದ ಜನ ಮರೆತಿಲ್ಲ ಎಂದು ನೆನಪಿಸಿದ್ದಾರೆ.
ಕೋಮುವಾದವನ್ನೇ ಉಸಿರಾಗಿಸಿಕೊಂಡ, ಹಿಂದೂ ಧರ್ಮವನ್ನು ರಾಜಕೀಯ ಆಯುಧವಾಗಿ ಬಳಸಿಕೊಂಡು ಭಾರತೀಯರನ್ನು ಒಡೆದು ಹಾಕಿದ ಆರ್‌ಎಸ್‌ಎಸ್ ಈಗ, ಬಿಜೆಪಿಯನ್ನು ರಾಜಕೀಯವಾಗಿ ಬಲಪಡಿಸಲು ಹಗಲು-ರಾತ್ರಿ ಶ್ರಮಿಸುತ್ತಿದೆ. ದೇಶದ ಬಗ್ಗೆಯಾಗಲಿ, ಹಿಂದೂ ಧರ್ಮದ ಬಗ್ಗೆಯಾಗಲಿ ಯಾವ ಪ್ರೀತಿ-ಅಭಿಮಾನ, ಬದ್ಧತೆಯೂ ಇಲ್ಲ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.