ಇ.ಡಿ
ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ನಡೆಸುತ್ತಿರುವ ಶಾಂತೇಶ್ ಗುರೆಡ್ಡಿ ಕುಟುಂಬದ ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ನಿಯಮಬಾಹಿರವಾಗಿ ವಿದೇಶಗಳಿಗೆ ಹಣ ರವಾನೆ ಮಾಡಿದೆ ಎಂಬುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆ ಮಾಡಿದೆ.
ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಂತೇಶ್ ಗುರೆಡ್ಡಿ ಅವರು ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಕಂಪನಿಯು ಆದಾಯ ತೆರಿಗೆ ವಂಚಿಸಿರುವ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿತ್ತು. ಅದರ ಆಧಾರದಲ್ಲೇ ಇ.ಡಿ ಸಹ ಪ್ರಕರಣ ದಾಖಲಿಸಿಕೊಂಡಿತ್ತು.
‘ಈ ಕಂಪನಿಯು ಕಬ್ಬಿಣದ ಅದಿರು ರಫ್ತು ಮಾಡುವಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಫೆಮಾ) ಉಲ್ಲಂಘಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಈಚೆಗೆ ಬೆಂಗಳೂರಿನ ಮೂರು ಕಡೆ ಮತ್ತು ಮಂಗಳೂರಿನ ಒಂದು ಕಡೆ ಶೋಧ ಕಾರ್ಯ ನಡೆಸಲಾಗಿತ್ತು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದಕ್ಕೆ ಪುರಾವೆಗಳು ದೊರೆತಿವೆ. ಕಂಪನಿಯು ಕೆಲ ಪ್ರಮಾಣದ ಕಲ್ಲಿದ್ದಲನ್ನೂ ರಫ್ತು ಮಾಡಿರುವುದು ಗೊತ್ತಾಗಿದೆ’ ಎಂದು ಇ.ಡಿ ಹೇಳಿದೆ.
‘ಕಂಪನಿಯು ಭಾರತದಿಂದ ರಫ್ತು ಮಾಡಿದ ಅದಿರಿಗೆ ಪೂರ್ಣ ಪ್ರಮಾಣದ ಹಣವನ್ನು ಪಡೆದಿಲ್ಲ. ಬದಲಿಗೆ ವಿದೇಶಗಳಲ್ಲಿ ಇರುವ ಕೆಲ ಕಂಪನಿಗಳ ಖಾತೆಗೆ ಹಣವನ್ನು ವರ್ಗಾಯಿಸಲಾಗಿದೆ. ಆ ಎಲ್ಲ ಕಂಪನಿಗಳಲ್ಲಿ ಕಂಪನಿಯ ನಿರ್ದೇಶಕರಾದ ಶಾಂತೇಶ್ ಗುರೆಡ್ಡಿ, ಜ್ಯೋತಿ ಗುರೆಡ್ಡಿ ಅವರು ಆಡಳಿತ ಮಂಡಳಿ ಸದಸ್ಯರು ಹಾಗೂ ಷೇರುದಾರರಾಗಿದ್ದಾರೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿತ್ತು. ಇದನ್ನು ಪುಷ್ಟೀಕರಿಸುವ ಹಲವು ದಾಖಲೆಗಳು ಶೋಧ ಕಾರ್ಯದ ವೇಳೆ ದೊರೆತಿದೆ’ ಎಂದು ಇ.ಡಿ ಮಾಹಿತಿ ನೀಡಿದೆ.
‘ಕಂಪನಿ, ಶಾಂತೇಶ್ ಮತ್ತು ಜ್ಯೋತಿ ಅವರ ಹೆಸರಿನಲ್ಲಿ ವಿದೇಶಗಳಲ್ಲಿ ಹತ್ತಾರು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಕಂಪನಿಯ ಆಡಳಿತ ಮಂಡಳಿ ಸದಸ್ಯರಾಗಿರುವ ಭವಾನಿ ಪ್ರಸಾದ್ ಟಪಾಲ್, ರೇಣುಕಾ ದೇವಿ, ರವೀಂದ್ರನಾಥ ಮತ್ತು ಉಮಾ ಆಳ್ವ ಅವರಿಗೆ ಸೇರಿದ ಸ್ಥಳಗಳಲ್ಲೂ ಶೋಧ ಕಾರ್ಯ ನಡೆಸಲಾಗಿದೆ. ಅಕ್ರಮವಾಗಿ ವರ್ಗಾವಣೆ ಮಾಡಿದ ಹಣವನ್ನು ಬಳಸಿಕೊಂಡು ಶಾಂತೇಶ್ ಅವರು ಲಂಡನ್‌ನಲ್ಲಿ ವಿಲ್ಲಾ ಖರೀದಿಸಿದ್ದಾರೆ. ಇತರರೂ ವಿದೇಶಗಳಲ್ಲಿ ಹಲವು ಸ್ವತ್ತುಗಳನ್ನು ಖರೀದಿಸಿದ್ದಾರೆ. ಈ ಸಂಬಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.