ADVERTISEMENT

ಪೋಡಿ ಸಮಸ್ಯೆ: 800 ಸರ್ವೆಯರ್‌ಗಳ ನೇಮಕ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 18:18 IST
Last Updated 17 ಡಿಸೆಂಬರ್ 2018, 18:18 IST

ಬೆಳಗಾವಿ: ‘ರಾಜ್ಯದಲ್ಲಿ ಪೋಡಿ ಸಮಸ್ಯೆ ಬಗೆಹರಿಸಲು ಹೊಸದಾಗಿ 800 ಸರ್ವೆಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪೋಡಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್‌ನ ಅಡಗೂರು ಎಚ್‌. ವಿಶ್ವನಾಥ್‌, ‘ತಿಂಗಳಿಗೆ 30 ಅರ್ಜಿ ವಿಲೇವಾರಿ ಆಗಬೇಕೆಂದು ಭೂ ದಾಖಲೆಗಳ ಆಯುಕ್ತ ಮುನೀಷ್‌ ಮೌದ್ಗಿಲ್‌ ಅವರು ಸರ್ವೆಯರ್‌ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದ್ದು ತಪ್ಪುಗಳಾಗುತ್ತಿವೆ. ಈ ಗೊಂದಲ ನಿವಾರಿಸಿ’ ಎಂದರು.

‘ದರ್ಖಾಸ್ತು ಭೂಮಿಗೆ ಪೋಡಿ ಮುಕ್ತ ಆಂದೋಲನ ಕೈಗೊಳ್ಳಲು ವಿಶೇಷ ತಂಡ ರಚಿಸಿ ಕಾಲಮಿತಿಯಲ್ಲಿ ಪೋಡಿ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

200 ಕೋಟಿ ವಿಶೇಷ ಅನುದಾನ

ಬೆಳಗಾವಿ: ಅತಿವೃಷ್ಟಿಗೆ ಒಳಗಾಗಿದ್ದ ಕೊಡಗು ಸೇರಿದಂತೆ ಎಂಟು ಜಿಲ್ಲೆಗಳಿಗೆ ₹ 200 ಕೋಟಿ ವಿಶೇಷ ಅನುದಾನ ಒದಗಿಸಲಾಗಿದೆ ಎಂದು ಬಿಜೆಪಿಯ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಉತ್ತರಿಸಿದರು.

ಕೊಡಗು ಜಿಲ್ಲೆಗೆ ₹ 85 ಕೋಟಿ ಅನುದಾನ ಒದಗಿಸಲಾಗಿದೆ. ಎನ್‍ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಕೇಂದ್ರದಿಂದ ₹546.21 ಕೋಟಿ ಅನುದಾನ ಮಂಜೂರು ಆಗಿದೆ. ಈ ಮೊತ್ತದಲ್ಲಿ ಕೊಡಗಿಗೂ ಶೀಘ್ರವೇ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದರು.

ಡಿಸೆಂಬರ್ 30ರೊಳಗೆ ಕೊಡಗು ಜಿಲ್ಲೆಗೆ ಬೆಳೆ ಪರಿಹಾರವಾಗಿ ₹ 103.82 ಕೋಟಿಯನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗಾಗಿ ₹27 ಕೋಟಿ ಅನುದಾನ ಒದಗಿಸಲಾಗಿದೆ. ಮೂಲಸೌಕರ್ಯ ಕಾಮಗಾರಿಗೆ ₹ 85 ಕೋಟಿ ಬಿಡುಗಡೆ ಮಾಡಿದ್ದು, ಮೂಲಸೌಕರ್ಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.