ADVERTISEMENT

ಎಸ್‌.ಪಿ ವಿರುದ್ಧ ದೂರು ನೀಡಿದ ಇನ್‌ಸ್ಪೆಕ್ಟರ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 20:00 IST
Last Updated 25 ಜನವರಿ 2019, 20:00 IST

ಮೈಸೂರು: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ವಿರುದ್ಧ ಐಜಿಪಿ ಶರತ್‌ ಚಂದ್ರ ಅವರಿಗೆ ಇನ್‌ಸ್ಪೆಕ್ಟರ್ ಸಿ.ವಿ.ರವಿ ದೂರು ನೀಡಿದ್ದಾರೆ.

‘ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿ ವರ್ಗಾವಣೆಯಾದ ಬಳಿಕ ಅಧಿಕಾರ ವಹಿಸಿಕೊಳ್ಳಲು ಹೋದಾಗ ನನ್ನನ್ನು ಮತ್ತು ನನ್ನ ತಾಯಿಯನ್ನು ತುಚ್ಛ ಶಬ್ದಗಳಿಂದ ನಿಂದಿಸಿದ್ದಾರೆ. ಇವರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಅನುಮತಿ ನೀಡಬೇಕು’ ಕೋರಿದ್ದಾರೆ.

ಏನಿದು ಘಟನೆ?: ನಗರದ ವಿ.ವಿ ಪುರಂ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ರವಿ ಜ. 14ರಂದು ಮೈಸೂರು ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆಗೊಂಡಿದ್ದರು. 15ರಂದು ಅಧಿಕಾರ ವಹಿಸಿಕೊಳ್ಳಲು ಹೋದಾಗ ದೂರವಾಣಿ ಮೂಲಕ ನಿಂದಿಸಿದ್ದಾರೆ ಎಂದು ದೂರಿದ್ದಾರೆ.

ADVERTISEMENT

‘ಅಂದು ಎಸ್‌.ಪಿ ಅವರು ಕಚೇರಿಯಲ್ಲಿ ಲಭ್ಯವಿರಲಿಲ್ಲ. ಅಧಿಕಾರ ವಹಿಸಿಕೊಳ್ಳಲು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ. 2 ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮತ್ತೊಮ್ಮೆ ಕರೆಮಾಡಿದಾಗ ತೀರಾ ಕೀಳುಮಟ್ಟದ ಶಬ್ದಗಳನ್ನು ಬಳಸಿ ನಿಂದಿಸಿದರು. ಇದರಿಂದ ನನ್ನ ತಾಯಿಯವರಪಾವಿತ್ರ್ಯಕ್ಕೆ ಧಕ್ಕೆಯಾಗಿದೆ’ ಎಂದು ರವಿ ತಿಳಿಸಿದ್ದಾರೆ.

‘ಎಸ್‌.ಪಿ ವಿರುದ್ಧ ಕ್ರಮ ಜರುಗಿಸಬೇಕು. ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.