ADVERTISEMENT

ಲಾಠಿ ಪ್ರಯೋಗ: ಪೊಲೀಸರ ವಿರುದ್ಧ ವಿಚಾರಣೆಗೆ ಹೈಕೋರ್ಟ್‌ ನಕಾರ

ತನಿಖೆಗೆ ಕೋರಿದ್ದ ಅರ್ಜಿದಾರರಿಗೆ ₹1 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 19 ಮೇ 2021, 16:30 IST
Last Updated 19 ಮೇ 2021, 16:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಲಾಕ್‌ಡೌನ್ ಜಾರಿಗೊಳಿಸುವ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ಇಲಾಖಾ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್‌) ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರಿಗೆ ₹1 ಸಾವಿರ ದಂಡ ವಿಧಿಸಿದೆ.

ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ‘ಪೊಲೀಸರ ವಿರುದ್ಧ ಆರೋಪಗಳಿದ್ದರೆ ಸಿಆರ್‌ಪಿಸಿ ಅಡಿಯಲ್ಲಿ ಖಾಸಗಿ ದೂರು ದಾಖಲಿಸಲು ಅವಕಾಶ ಇದೆ’ ಎಂದು ಹೇಳಿತು.

ಟ್ರೇಡ್ ಯೂನಿಯನ್ ಕಾರ್ಯಕರ್ತರೂ ಆಗಿರುವ ವಕೀಲ ಎಸ್. ಬಾಲಕೃಷ್ಣನ್ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಜನರ ಮೇಲೆ ಬಲ ಪ್ರಯೋಗ ಮಾಡಿದ್ದಾರೆ ಎಂಬುದಕ್ಕೆ ಮಾಧ್ಯಮಗಳ ವರದಿಯನ್ನು ಅವರು ಉಲ್ಲೇಖಿಸಿದ್ದರು.

ADVERTISEMENT

‘ಕೆಲವೆಡೆ ಪೊಲೀಸರು ಮಿತಿ ಮೀರಿ ವರ್ತಿಸಿರಬಹುದು. ಅದಕ್ಕಾಗಿ ತನಿಖೆಗೆ ಆದೇಶಿಸಲು ಆಗುವುದಿಲ್ಲ. ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸರು ಜನರ ಮೇಲೆ ಯಾವುದೋ ಸಂತೋಷಕ್ಕಾಗಿ ಹಲ್ಲೆ ನಡೆಸಿರುವುದಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲಾಲಾ ಲಜಪತ್ ರಾಯ್ ಅವರ ಮೇಲೆ ನಡೆದಿದ್ದ ಪೊಲೀಸ್ ದೌರ್ಜನ್ಯದ ಉದಾಹರಣೆಯನ್ನು ಅರ್ಜಿದಾರರು ಉಲ್ಲೇಖಿಸಿದ್ದರು.

‘ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಲಾಠಿ ಚಾರ್ಜ್‌ಗೂ ಕೋವಿಡ್ ಲಾಕ್‌ಡೌನ್ ಜಾರಿಗೊಳಿಸುವ ಸಂದರ್ಭಕ್ಕೂ ಸಾಮ್ಯತೆ ಕಲ್ಪಿಸಲು ಆಗುವುದಿಲ್ಲ. ಕೋವಿಡ್ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಜಾರಿಗೊಳಿಸಲು ಪೊಲೀಸರು ಪ್ರಾಣವನ್ನೇ ಪಣಕ್ಕಿಟ್ಟು ಬೀದಿಗೆ ಇಳಿದಿರುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಸಾಕಷ್ಟು ಮಂದಿ ಮುಂಚೂಣಿ ಯೋಧರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ’ ಎಂದು ಪೀಠ ಹೇಳಿತು.

ಅರ್ಜಿಯಲ್ಲಿ ಗಂಭೀರತೆ ಇಲ್ಲ ಎಂದು ಪರಿಗಣಿಸಿದ ಪೀಠ, ಅರ್ಜಿದಾರರಿಗೆ ₹1 ಸಾವಿರ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿತು. ‘ಕರ್ನಾಟಕ ಪೊಲೀಸರೆಂದರೆ ದೇಶದಲ್ಲೇ ಉತ್ತಮವಾದ ಶಿಸ್ತು ಬದ್ಧತೆಯನ್ನು ಹೊಂದಿದ ಪಡೆ ಎಂದು ನ್ಯಾಯಮೂರ್ತಿ ಶರ್ಮಾ ಮೌಖಿಕವಾಗಿ ಅಭಿಪ್ರಾಯಪಟ್ಟರು. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ದುಬಾರಿ ಕಾರುಗಳೊಂದಿಗೆ ಖಾಲಿ ರಸ್ತೆಗಳನ್ನು ನೋಡಲು ಬರುವ ಜನರೂ ಇದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.