ADVERTISEMENT

ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್‌ ಬಲೆಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 2:33 IST
Last Updated 8 ಫೆಬ್ರುವರಿ 2020, 2:33 IST
   

ಬೆಂಗಳೂರು: ಅಪಘಾತ ಪ್ರಕರಣದಲ್ಲಿ ಜಪ್ತಿ ಮಾಡಿದ್ದ ದ್ವಿಚಕ್ರ ವಾಹನ ಬಿಡುಗಡೆ ಮಾಡಲು ₹ 5 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಚಿಕ್ಕಜಾಲ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ಮುರಳಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

‘ವಾಹನ ಮಾಲೀಕರು ನೀಡಿದ್ದ ದೂರಿನಡಿ ಕಾರ್ಯಾಚರಣೆ ನಡೆಸಿ ಆರೋಪಿ ಮುರಳಿ ಅವರನ್ನು ಬಂಧಿಸಲಾಗಿದೆ. ಲಂಚದ ಹಣವನ್ನೂ ಜಪ್ತಿ ಮಾಡಲಾಗಿದೆ’ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಠಾಣೆ ವ್ಯಾಪ್ತಿಯಲ್ಲಿ ಇದೇ 1ರಂದು ಅಪಘಾತ ಸಂಭವಿಸಿತ್ತು. ದ್ವಿಚಕ್ರ ವಾಹನ ಪಾದಚಾರಿಗೆ ಗುದ್ದಿತ್ತು. ಸ್ಥಳಕ್ಕೆ ಹೋಗಿದ್ದ ಪೊಲೀಸರು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದರು. ಠಾಣೆ ಎದುರು ತಂದು ನಿಲ್ಲಿಸಿದ್ದರು. ಮಾಲೀಕರು ವಾಹನ ಬಿಡಿಸಿಕೊಳ್ಳಲು ಠಾಣೆಗೆ ಹೋಗಿ ವಿಚಾರಿಸಿದ್ದರು.’

ADVERTISEMENT

‘ಮಾಲೀಕರನ್ನು ಮಾತನಾಡಿಸಿದ್ದ ಮುರಳಿ, ವಾಹನ ಬಿಡುಗಡೆ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳ ವರದಿ ಬೇಕು. ಅದಕ್ಕೆ ₹ 5 ಸಾವಿರ ಖರ್ಚಾಗುತ್ತದೆ. ಅದರ ಮೇಲೆ ₹ 1 ಸಾವಿರ ಹೆಚ್ಚುವರಿಯಾಗಿ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬೇಸತ್ತ ವಾಹನ ಮಾಲೀಕ ಎಸಿಬಿಗೆ ದೂರು ನೀಡಿದ್ದರು. ಮಾಲೀಕರಿಂದ ಹಣ ಪಡೆಯುತ್ತಿದ್ದ ವೇಳೆಯಲ್ಲೇ ದಾಳಿ ಮಾಡಿ ಆರೋಪಿಯನ್ನು ಸೆರೆ ಹಿಡಿಯಲಾಯಿತು’ ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.