ADVERTISEMENT

ಪೊಲೀಸ್ ಹುದ್ದೆ  ಭರ್ತಿ ವಿಳಂಬ: ಹೈಕೋರ್ಟ್‌ ತರಾಟೆ

POLICE

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 16:30 IST
Last Updated 18 ನವೆಂಬರ್ 2021, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಖಾಲಿಯಿರುವ ಸಬ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಲು 2022ರ ಜುಲೈ ಅಂತ್ಯದವರೆಗೆ ಸಮಯಾವಕಾಶ ನೀಡಬೇಕು‘ ಎಂಬ ಸರ್ಕಾರದ ಕೋರಿಕೆಯನ್ನು ಖಡಾಖಂಡಿತವಾಗಿ ನಿರಾಕರಿಸಿರುವ ಹೈಕೋರ್ಟ್, ‘ಇದೇನಾ ಸರ್ಕಾರದ ಕಾರ್ಯ ವೈಖರಿ’ ಎಂದು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಕನಿಷ್ಠ ಕಾಲಮಿತಿಯೊಳಗೆ ಈ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಒಂದು ವಾರದಲ್ಲಿ ಸ್ಪಷ್ಟಪಡಿಸಿ’ ಎಂದು ಕಟ್ಟುನಿಟ್ಟಿನ ತಾಕೀತು ಮಾಡಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ‘ಒಟ್ಟು 1,142 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು 4,460 ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿಯಿವೆ. 2022ರ ಜುಲೈ ಅಂತ್ಯದೊಳಗೆ ಇವುಗಳನ್ನು ಭರ್ತಿ ಮಾಡಲಾಗುವುದು’ ಎಂದರು.

ADVERTISEMENT

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ,‘ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ ಎಂಟು ತಿಂಗಳು ಏಕೆ’ ಎಂದು ಖಾರವಾಗಿ ಪ್ರಶ್ನಿಸಿತು.

ಸರ್ಕಾರಿ ವಕೀಲರು, ‘ಒಟ್ಟಾರೆ 16 ಸಾವಿರ ಹುದ್ದೆ ಖಾಲಿಯಿದ್ದವು. ಇವುಗಳಲ್ಲಿ ಭಾಗಶಃ ಭರ್ತಿ ಮಾಡಲಾಗಿದೆ.ಕೋವಿಡ್ ಪರಿಸ್ಥಿತಿ ಎದುರಾದ ಕಾರಣ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ವಿಳಂಬವಾಗಿದೆ’ ಎಂದುಸಮಜಾಯಿಷಿ ನೀಡಲು ಮುಂದಾದರು.

ಆದರೆ, ಇದನ್ನು ಒಪ್ಪದನ್ಯಾಯಪೀಠ,‘2019ರಲ್ಲಿಯೇ ಮೂರು ತಿಂಗಳ ಕಾಲಾವಕಾಶ ಪಡೆದಿದ್ದಿರಿ. ಈಗಾಗಲೇ ಎರಡು ವರ್ಷ ತೆಗೆದುಕೊಳ್ಳಲಾಗಿದೆ. ಈಗಲೂ ಎಂಟು ತಿಂಗಳ ಕಾಲಾವಕಾಶ ಬೇಕು ಎಂದು ಕೇಳುತ್ತಿದ್ದೀರಿ. ಈ ಬಗ್ಗೆಒಂದು ವಾರದಲ್ಲಿ ಸ್ಪಷ್ಟಪಡಿಸಿ’ ಎಂದು ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.