ADVERTISEMENT

ಪಿಒಪಿ ಗಣಪನ ಮೂರ್ತಿ ಮೇಲೆ ಕಣ್ಣಿಡಿ: ಪರಿಸರ ಸಚಿವ ಈಶ್ವರ ಬಿ. ಖಂಡ್ರೆ

ಪರಿಸರ ಇಲಾಖೆ ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚೆನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 16:09 IST
Last Updated 24 ಜುಲೈ 2025, 16:09 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ಗಣಪ ಮತ್ತು ಗೌರಿಯ ಮೂರ್ತಿಗಳ ತಯಾರಿಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಈಗಿನಿಂದಲೇ ಕ್ರಮ ತೆಗೆದುಕೊಳ್ಳಿ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು  ಹೇಳಿದರು.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಿಓಪಿ ಮೂರ್ತಿಗಳಲ್ಲಿ ಗಂಧಕ, ರಂಜಕ, ಜಿಪ್ಸಂ ಮತ್ತು ಮೆಗ್ನೀಷಿಯಂತಹ ಅನೇಕ ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಇವುಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ. ಇವುಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ, ನೀರು ಮಲಿನವಾಗುತ್ತದೆ’ ಎಂದರು.

‘ಪಿಒಪಿ ಗಣಪ ಮತ್ತು ಗೌರಿಯ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಬಳಕೆಯನ್ನು 2023ರಲ್ಲೇ ನಿಷೇಧಿಸಲಾಗಿದೆ. ಗಣೇಶನ ಹಬ್ಬ ಹತ್ತಿರವಾಗುತ್ತಿದ್ದು, ಪಿಒಪಿ ಮೂರ್ತಿಗಳ ತಯಾರಿಕೆಗೆ ಈಗಿನಿಂದಲೇ ಕಡಿವಾಣ ಹಾಕಿದರೆ ಸೂಕ್ತ. ಹೀಗಾಗಿ ಈ ಬಗ್ಗೆ ಜನರಲ್ಲಿ, ಮೂರ್ತಿ ತಯಾರಕರಲ್ಲಿ ಜಾಗೃತಿ ಮೂಡಿಸಿ ಎಂದು ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯಗಳು ಮತ್ತು ವಿವಿಧ ಬಡಾವಣೆಯಲ್ಲಿರುವ ಕ್ಷೇಮಾಭಿವೃದ್ಧಿ ಸಂಘಗಳನ್ನು ಸಂಪರ್ಕಿಸಿ, ಪಿಓಪಿ ಗಣಪತಿ ಮೂರ್ತಿಗಳ ಬದಲು ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಪೂಜಿಸುವಂತೆ ತಮ್ಮ ಸದಸ್ಯರಿಗೆ ತಿಳಿಸುವಂತೆ ಮನವಿ ಮಾಡಲೂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.