ADVERTISEMENT

ಜಿಲ್ಲಾ ಆಸ್ಪತ್ರೆಗಳಲ್ಲಿ ಪೋಸ್ಟ್‌ ಕೋವಿಡ್‌ ಕೇಂದ್ರ: ಡಾ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 14:42 IST
Last Updated 5 ನವೆಂಬರ್ 2020, 14:42 IST
ಡಾ.ಸುಧಾಕರ್
ಡಾ.ಸುಧಾಕರ್   

ಬೆಂಗಳೂರು: ಕೋವಿಡ್‌ ಸೋಂಕಿಗೆ ಒಳಗಾಗಿ ಗುಣಮುಖರಾದರೂ, ನಾನಾ ರೀತಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್‌ ಕೋವಿಡ್‌ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ (ರಿಹ್ಯಾಬಿಲಿಟೇಶನ್‌) ಆರಂಭಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಚಳಿಗಾಲ ಮತ್ತು ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಚಿವರು ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರೊಂದಿಗೆ ವಿಧಾನಸಭೆಯಲ್ಲಿ ಗುರುವಾರ ಸಮಾಲೋಚನೆ ನಡೆಸಿದರು.

ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕೋವಿಡ್‌ ಸೋಂಕಿನಿಂದ ತೀವ್ರ ಸಮಸ್ಯೆಗೊಳಗಾದವರು ಗುಣಮುಖರಾದ ಬಳಿಕವೂ ನಿಗಾ ಇರಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ, ವಿಕ್ಟೋರಿಯಾ, ಬೌರಿಂಗ್‌, ಕೆ.ಸಿ.ಜನರಲ್‌ ಆಸ್ಪತ್ರೆಗಳಲ್ಲಿ ಪೋಸ್ಟ್‌ ಕೋವಿಡ್‌ ಕೇಂದ್ರ ಮತ್ತು ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಅಲ್ಲದೆ, ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲೂ ಈ ರೀತಿಯ ಕೇಂದ್ರಗಳನ್ನು ಆರಂಭಿಸಲಾಗುವುದು. ಕೇಂದ್ರಕ್ಕೆ ಬೇಕಾದ ಸೌಲಭ್ಯ, ಸಿಬ್ಬಂದಿ ಮೊದಲಾದವುಗಳ ಬಗ್ಗೆ ತಜ್ಞರು ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಕೆಲವು ಖಾಸಗಿ ಆಸ್ಪತ್ರೆಗಳು ಈ ರೀತಿಯ ಕೇಂದ್ರಗಳನ್ನು ಆರಂಭಿಸಿವೆ. 100 ಕ್ಕಿಂತ ಹೆಚ್ಚು ಹಾಸಿಗೆಗಳು ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಈ ರೀತಿಯ ಕೇಂದ್ರಗಳನ್ನು ಆರಂಭಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಶೇ 5 ರಷ್ಟು ಜನರಲ್ಲಿ ಪುನಃ ಸೋಂಕು ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಮೊದಲ ಬಾರಿ ಹೆಚ್ಚು ಲಕ್ಷಣಗಳೊಂದಿಗೆ ಸೋಂಕು ಹೊಂದಿದವರಿಗೆ ಎರಡನೇ ಬಾರಿ ಸೋಂಕು ಬಂದಾಗ ತೀವ್ರತೆ ಇರುವುದಿಲ್ಲ. ಅದೇ ರೀತಿ ಮೊದಲ ಬಾರಿ ಲಕ್ಷಣ ಇಲ್ಲದೆ ಸೋಂಕಿತರಾದವರಿಗೆ ಎರಡನೇ ಬಾರಿ ಸೋಂಕು ಬಂದಾಗ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಗುಣಮುಖರಾದವರು ಕೋವಿಡ್ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಧಾಕರ್‌ ಸಲಹೆ ನೀಡಿದರು.

‘ಅನಾರೋಗ್ಯ ಇದ್ದರೆ ಆಸ್ಪತ್ರೆಗೆ ಹೋಗಿ’

ಕೆಲವರು ಅನಾರೋಗ್ಯದ ಲಕ್ಷಣ ಕಾಣಿಸಿಕೊಂಡಾಗ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಮನೆಯಲ್ಲೇ ಉಳಿಯುತ್ತಾರೆ. ಇದು ಸರಿಯಲ್ಲ, ಅನಾರೋಗ್ಯ ಆದಾಗ ಆಸ್ಪತ್ರೆಗೆ ಹೋಗಿ ಪ್ರಾಮಾಣಿಕವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಾ.ಸುಧಾಕರ್‌ ಸಲಹೆ ನೀಡಿದರು.

ಬೇರೆ ಬೇರೆ ರೋಗ ಲಕ್ಷಣ ಕಾಣಿಸಿಕೊಂಡಾಗಲೂ ಕೆಲವರು ಭಯದಿಂದ ಆಸ್ಪತ್ರೆಗೆ ಹೋಗುತ್ತಿಲ್ಲ. ಹಲ್ಲು ನೋವುಇದ್ದವರೂ ದಂತ ಆಸ್ಪತ್ರೆಗಳಿಗೆ ಹೋಗುತ್ತಿಲ್ಲ. ಭಯದಿಂದ ಚಿಕಿತ್ಸೆಯಿಂದ ದೂರ ಉಳಿಯಬಾರದು ಎಂದು ಅವರು ಹೇಳಿದರು.

ಕೋವಿಡ್‍ನಿಂದಾದ ಸಾವಿನ ಕುರಿತು ಅಧ್ಯಯನ ನಡೆಸಿ ವಿವರವಾದ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಎರಡನೇ ಬಾರಿಗೆ ಸೋಂಕು ಬರುವ ಬಗ್ಗೆಯೂ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ. ಈ ಎರಡು ವರದಿಗಳು ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.