ADVERTISEMENT

5–8ನೇ ತರಗತಿ ಬೋರ್ಡ್‌ ಪರೀಕ್ಷೆ ಮುಂದೂಡಿಕೆ: ಮನವಿಗೆ ನಕಾರ

ಸುಪ್ರೀಂಕೋರ್ಟ್‌ ವಿಚಾರಣೆ 27ಕ್ಕೆ: ಅದೇ ದಿನ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 19:06 IST
Last Updated 21 ಮಾರ್ಚ್ 2023, 19:06 IST
   

ಬೆಂಗಳೂರು: ‘ರಾಜ್ಯ ಪಠ್ಯಕ್ರಮ ಹೊಂದಿದ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಇದೇ 27ರಿಂದ ಬೋರ್ಡ್‌ (ಮಂಡಳಿ) ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು ಇದನ್ನು ಮುಂದೂಡಬೇಕು‘ ಎಂಬ ಅರ್ಜಿದಾರ ಮನವಿಯನ್ನು ಆಲಿಸಲು ಹೈಕೋರ್ಟ್‌ ನಿರಾಕರಿಸಿದೆ.

ಅರ್ಜಿದಾರರಾದ ‘ಅನುದಾನರಹಿತ ಖಾಸಗಿ ಶಾಲೆ’ಗಳ ಪರ ವಕೀಲ ಎ.ವೇಲನ್‌, ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಿ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಲು ಕೋರಿದರು.

‘ಬೋರ್ಡ್‌ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ವಿಶೇಷ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಇದೇ 27ರಂದು ವಿಚಾರಣೆ ನಡೆಸಲಿದೆ’ ಎಂದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು, ‘ಪ್ರಕರಣವನ್ನು ಹೈಕೋರ್ಟ್‌ನ ವಿಭಾಗೀಯ ವಿಶೇಷ ನ್ಯಾಯಪೀಠ ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿದೆ. ಆ ನ್ಯಾಯಪೀಠದಲ್ಲಿ ನಾನಿಲ್ಲ. ಈಗಾಗಲೇ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ನಿಗದಿಯಾಗಿರುವಾಗ ಇಲ್ಲಿ ಹೇಗೆ ವಿಚಾರಣೆ ನಡೆಸಬೇಕು ಎಂದು ಕೋರುತ್ತೀರಿ. ಇದು ಸರಿಯಾದ ಕ್ರಮವಲ್ಲ. ನೀವು ರಿಜಿಸ್ಟ್ರಿಯನ್ನು ಸಂಪರ್ಕಿಸಿ’ ಎಂದು ಸೂಚಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.