ADVERTISEMENT

ಕಲ್ಲಿದ್ದಲು ಖಾಲಿ: ಕತ್ತಲಿನತ್ತ ಕರ್ನಾಟಕ

ಕೇಂದ್ರಕ್ಕೆ ಮುಖ್ಯಮಂತ್ರಿ ಪತ್ರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:15 IST
Last Updated 17 ಅಕ್ಟೋಬರ್ 2018, 19:15 IST
.
.   

ಬೆಂಗಳೂರು/ರಾಯಚೂರು:ಕಲ್ಲಿದ್ದಲು ಕೊರತೆಯಿಂದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಬಳಲುತ್ತಿದ್ದು, ರಾಜ್ಯದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆಯ ಆತಂಕ ಎದುರಾಗಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿ (ಆರ್‌ಟಿಪಿಎಸ್‌) ಬುಧವಾರನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಿವೆ. ಕಲ್ಲಿದ್ದಲು ದಾಸ್ತಾನು ಸಂಪೂರ್ಣ ಖಾಲಿಯಾಗಿದೆ. ಇಲ್ಲಿ ದೈನಂದಿನ ಪೂರೈಕೆ ಅವಲಂಬಿಸಿ ವಿದ್ಯುತ್‌ ಉತ್ಪಾದನೆ ನಡೆಯುತ್ತಿದೆ.

ಬಳ್ಳಾರಿಯ ಬಿಟಿಪಿಎಸ್‌ ಮತ್ತು ಯರಮರಸ್‌ನ ವೈಟಿಪಿಎಸ್‌ನ ವಿದ್ಯುತ್‌ ಉತ್ಪಾದನಾ ಸ್ಥಾವರಗಳಲ್ಲಿ ಐದು ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ಇದೆ. ಮುಂದೆ ಕೊರತೆ ಆದಲ್ಲಿ ಅಲ್ಲಿಯೂ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಕೇಂದ್ರ ಕಲ್ಲಿದ್ದಲು ಸಚಿವ ಪೀಯೂಷ್‌ ಗೋಯಲ್‌ಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಕಲ್ಲಿದ್ದಲು ಪೂರೈಕೆ ಒಪ್ಪಂದದ ಪ್ರಕಾರ,ನಮಗೆ ನೀಡಬೇಕಿದ್ದ 6 ಲಕ್ಷ ಟನ್‌ ಪೂರೈಕೆ ಮಾಡಿಲ್ಲ’ ಎಂದು ತಿಳಿಸಿದ್ದಾರೆ.

‘ ಎಂಸಿಎಲ್‌ ಹಾಗೂ ವೆಸ್ಟರ್ನ್ ಕೋಲ್‌ ಫೀಲ್ಡ್ಸ್‌ನಿಂದ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಸಬೇಕು’ ಎಂದೂ ಕೋರಿದ್ದಾರೆ.

10 ಸಾವಿರ ಟನ್‌ ಮಾತ್ರ: ಆರ್‌ಟಿಪಿಎಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲು ದಿನಕ್ಕೆ ಗರಿಷ್ಠ 30 ಸಾವಿರ ಟನ್‌ ಕಲ್ಲಿದ್ದಲು ಬೇಕು. ಸದ್ಯ 10 ರಿಂದ 12 ಸಾವಿರ ಟನ್‌ ಕಲ್ಲಿದ್ದಲು ಬರುತ್ತಿದೆ. ದಿನಕ್ಕೆ ಎಂಟು ರೇಕ್‌ಗಳ (ಸರಕು ರೈಲು) ಬದಲಿಗೆ ಮೂರು ಅಥವಾ ನಾಲ್ಕು ರೇಕ್‌ ಕಲ್ಲಿದ್ದಲು ಪೂರೈಕೆ ಆಗುತ್ತಿದೆ.

ಯರಮರಸ್‌ ಮತ್ತು ಬಳ್ಳಾರಿ ಶಾಖೋತ್ಪನ್ನ ಕೇಂದ್ರಗಳಲ್ಲಿ ಸ್ವಲ್ಪ ಮಟ್ಟಿಗೆ ವಿದ್ಯುತ್‌ ಉತ್ಪಾದನೆ ಆಗುತ್ತಿರುವುದರಿಂದ ಲೋಡ್‌ ಶೆಡ್ಡಿಂಗ್‌ ಮಾಡಬೇಕಾದ ಸ್ಥಿತಿ ಸದ್ಯಕ್ಕೆ ಉದ್ಭವಿಸಿಲ್ಲ
-ಪಿ.ರವಿಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.