ADVERTISEMENT

ಪ್ರತ್ಯೇಕ ಬೆಳೆ ವಿಮೆ ಯೋಜನೆಗೆ ಚಿಂತನೆ

ಬಿಹಾರದಂತೆ ಫಸಲ್‌ ಬಿಮಾ ಯೋಜನೆ ಕೈಬಿಡಲು ರಾಜ್ಯ ಉದ್ದೇಶ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 17:35 IST
Last Updated 16 ನವೆಂಬರ್ 2018, 17:35 IST

ಬೆಂಗಳೂರು: ಬಿಹಾರ ಮಾದರಿಯಲ್ಲಿ ‘ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆ‘ಯನ್ನು (ಪಿಎಂಎಫ್‌ಬಿವೈ) ಕೈಬಿಟ್ಟು ಹೊಸ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಪಿಎಂಎಫ್‌ಬಿವೈ 2016ರಲ್ಲಿ ಜಾರಿಗೆ ಬಂದಿದ್ದು, ರೈತರಿಗಿಂತಲೂ ವಿಮಾ ಕಂಪನಿಗೆ ಇದರಿಂದ ಲಾಭವಾಗುತ್ತಿದೆ ಎಂಬ ಟೀಕೆ ಬರುತ್ತಿರುವುದು ರಾಜ್ಯ ಸರ್ಕಾರದ ಚಿಂತನೆಗೆ ಕಾರಣವಾಗಿದೆ.

‍ಪಿಎಂಎಫ್‌ಬಿವೈ ಅಡಿ ರೈತರಿಗೆ ಪರಿಹಾರ ಕೊಡುವುದಕ್ಕೆ ಅತ್ಯಂತ ಕಠಿಣವಾದ ಷರತ್ತುಗಳನ್ನು ರೂಪಿಸಿರುವುದರ ಜೊತೆಗೆ ಪರಿಹಾರ ದೊರೆಯುವುದು ವಿಳಂಬ ಆಗುತ್ತಿರುವುದರಿಂದ ತನ್ನದೇ ಬೆಳೆ ವಿಮಾ ಯೋಜನೆ ಜಾರಿಗೆ ತರಲು ಸರ್ಕಾರ ಆಲೋಚಿಸುತ್ತಿದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಮಾಧ್ಯಮ ಪ್ರತಿನಿಧಿಗಳಿಗೆ
ತಿಳಿಸಿದರು.

ADVERTISEMENT

2016–17ರ ಸಾಲಿನಲ್ಲಿ ಬೆಳೆ ಪರಿಹಾರಕ್ಕೆ ರೈತರು ಸಲ್ಲಿಸಿರುವ ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ. ಈ ಯೋಜನೆ ರೈತ ಸ್ನೇಹಿ ಆಗಿಲ್ಲ ಎಂಬುದು ನಮ್ಮ ಭಾವನೆ. ಇದರಿಂದಾಗಿ ಬಿಹಾರವು ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಬದಿಗೊತ್ತಿ ತನ್ನದೇ ಯೋಜನೆಯನ್ನು ಈ ವರ್ಷದ ಆರಂಭದಲ್ಲಿ ಜಾರಿಗೆ ತಂದಿದೆ ಎಂದು ಅವರು ನುಡಿದರು.

ರಾಜ್ಯ ಸರ್ಕಾರ ತನ್ನದೇ ಯೋಜನೆ ಜಾರಿಗೊಳಿಸುವ ವಿಚಾರ ಹಣಕಾಸು ಪರಿಸ್ಥಿತಿಯನ್ನು ಅವಲಂಬಿಸಿದೆ. ಸದ್ಯ ಕೇಂದ್ರದ ಯೋಜನೆಗೆ ರೈತರು ಶೇ 1.5ರಿಂದ 2ರಷ್ಟು ಹಣ ಪಾವತಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸಮಾನ ಪಾಲು ನೀಡುತ್ತಿವೆ. ಇದರಿಂದ ಬೊಕ್ಕಸಕ್ಕೆ ₹ 1200 ಕೋಟಿ ಖರ್ಚಾಗುತ್ತಿದೆ ಎಂದು ರೆಡ್ಡಿ ವಿವರಿಸಿದರು.

ಕಳೆದ ವರ್ಷದ ಮುಂಗಾರು ಹಂಗಾಮಿಗೆ ಹೋಲಿಸಿದರೆ ಈ ವರ್ಷದ ಮುಂಗಾರಿನಲ್ಲಿಪಿಎಂಎಫ್‌ಬಿವೈಗೆ ನೋಂದಣಿ ಕಡಿಮೆ ಆಗಿದೆ. ಕಳೆದ ವರ್ಷ 17 ಲಕ್ಷ ಹೆಕ್ಟೇರ್‌ ಆಗಿತ್ತು. ಆದರೆ, ಈ ವರ್ಷ 12 ಲಕ್ಷ ಹೆಕ್ಟೇರ್ ಆಗಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್‌ ತಿಳಿಸಿದರು.

ಬ್ಯಾಂಕುಗಳಿಂದ ಸಾಲ ಪಡೆಯುವ ರೈತರಿಗೆ ವಿಮೆ ಮಾಡಿಸುವುದು ಕಡ್ಡಾಯ. ಮುಂಗಾರು ಹಂಗಾಮಿನಲ್ಲಿ ರೈತರು ಮಿತಿ ಮೀರಿ ಸಾಲ ಪಡೆಯುತ್ತಾರೆ. ಆದರೆ, ಹಿಂಗಾರು ರೈತರಿಗೆ ಸಾಲ ಪಡೆಯಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಸ್ವಲ್ಪ ಹಣವನ್ನು ಮೀಸಲಿಡುವಂತೆ ಬ್ಯಾಂಕುಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಸಾಲ ಮನ್ನಾ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಬಹಳಷ್ಟು ರೈತರು ತಮ್ಮ ಸಾಲವನ್ನು ನವೀಕರಣ ಮಾಡಿಲ್ಲ. ವಿಮೆ ನೋಂದಣಿ ಕಡಿಮೆ ಆಗಲು ಇದೂ ಒಂದು ಕಾರಣ ಎಂದು ರಾವ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.