ADVERTISEMENT

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ: ಸಾಹಿತಿ ದೊಡ್ಡರಂಗೇಗೌಡ ಅಭಿಮತ

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಸಂವಾದ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 7:28 IST
Last Updated 25 ಜನವರಿ 2021, 7:28 IST
ಪ್ರಜಾವಾಣಿ ಪೇಸ್‌ಬುಕ್‌ ಲೈವ್‌ ಅಲ್ಲಿ ಸಾಹಿತಿ ದೊಡ್ಡರಂಗೇಗೌಡ
ಪ್ರಜಾವಾಣಿ ಪೇಸ್‌ಬುಕ್‌ ಲೈವ್‌ ಅಲ್ಲಿ ಸಾಹಿತಿ ದೊಡ್ಡರಂಗೇಗೌಡ   

ಬೆಂಗಳೂರು: ವಿದೇಶದ ಇಂಗ್ಲಿಷನ್ನು ಒಪ್ಪುತ್ತೀರಾದರೆ, ದೇಸೀ ಭಾಷೆಯ ಬಗ್ಗೆ ವಿರೋಧ ಏಕೆ ಎಂಬುದು ನನಗೆ ಅರ್ಥವಾಗದ ಸಂಗತಿ ಎಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ, ಸಾಹಿತಿ ದೊಡ್ಡರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು, 'ಕನ್ನಡ ನನ್ನ ಜಪ, ತಪ, ಅನುಷ್ಠಾನ ಹಾಗೂ ಎಲ್ಲವೂ ಎಂಬುದರಲ್ಲಿ ಎರಡು ಮಾತಿಲ್ಲ. 250 ವರ್ಷದ ಗುಲಾಮಗಿರಿಯ ಸಂಕೇತವಾಗಿರುವ ವಿದೇಶದ ಇಂಗ್ಲಿಷನ್ನು ಒಪ್ಪುತ್ತೀರಾದರೆ, ದೇಸೀ ಭಾಷೆಯ ಬಗ್ಗೆ ವಿರೋಧ ಏಕೆ ಎಂಬುದು ನನಗೆ ಅರ್ಥವಾಗದ ಸಂಗತಿ' ಎಂದು ಹೇಳಿದರು.

'ಯಾವ ಭಾಷೆಯ ಮೇಲೆ ಯಾವ ಭಾಷೆಯೂ ಹೇರಿಕೆ ಆಗಬಾರದು. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಇಂಗ್ಲಿಷ್‌ ಭಾಷೆಯ ಬಗೆಗಿನ ಪೋಷಕರ ವ್ಯಾಮೋಹ ಕನ್ನಡದ ಬೆಳವಣಿಗೆಗೆ ತೊಡಕಾಗಿದೆ' ಎಂದು ದೊಡ್ಡರಂಗೇಗೌಡ ಖೇದ ವ್ಯಕ್ತಪಡಿಸಿದರು.

ADVERTISEMENT

'ಕನ್ನಡವನ್ನು ಓದುವ ಮೂಲಕ ಕೆಲಸ ಪಡೆದುಕೊಳ್ಳಲು ಸಾಧ್ಯ, ಉನ್ನತ ಹುದ್ದೆಗೆ ಏರಲು ಸಾಧ್ಯ. ಅದಕ್ಕೆ ಜೀವಂತ ಉದಾಹರಣೆ ಎಂದರೆ ದೊಡ್ಡರಂಗೇಗೌಡರ ಕುಟುಂಬ' ಎಂದು ಅವರು ತಿಳಿಸಿದರು.

'ರೈಲ್ವೇ ಉದ್ಯೋಗಿಯಾಗಿದ್ದಾಗಿನಿಂದಲೂ ಕನ್ನಡದಲ್ಲೂ ಪರೀಕ್ಷೆ ಇರಬೇಕು ಎಂದು ಒತ್ತಾಯಿಸುತ್ತಿದ್ದವನು ನಾನು. ಕೆಎಎಸ್‌, ಐಎಎಸ್‌ ಪ್ರಶ್ನೆ ಪತ್ರಿಕೆಗಳು ಕನ್ನಡದಲ್ಲೇ ಇರಬೇಕೆಂದೂ ಸಹ ಒತ್ತಾಯಿಸಿದ್ದೇನೆ' ಎಂದು ದೊಡ್ಡರಂಗೇಗೌಡ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಇದೇ ವೇಳೆ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಅವರು, 'ಕನ್ನಡ ಶಾಲೆಗಳ ಉತ್ತಮೀಕರಣವನ್ನುಯಾವುದೇ ಸರ್ಕಾರಗಳು ಮಾಡಿಲ್ಲವೇಕೆ? ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಪ್ರಯತ್ನಿಸಿದ್ದರೆ,ನಾವು ಇಷ್ಟೊಂದು ಹೀನಾಯ ಸ್ಥಿತಿಗೆ ತಲುಪುತ್ತಿರಲಿಲ್ಲ. ಪ್ರತಿ ಶಾಸಕ, ಸಂಸದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡರೆ, ಕನ್ನಡ ಶಾಲೆಗಳು ಉತ್ತಮ ಸ್ಥಿತಿಗೆ ತಲುಪಬಹುದು. ಎಲ್ಲ ವಿದ್ಯುನ್ಮಾನ ತಂತ್ರಜ್ಞಾನಗಳಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಅಳವಡಿಸಬೇಕು' ಎಂದು ಒತ್ತಾಯಿಸಿದರು.

ಹಿಂದಿಯೇ ಸೌರ್ವಭೌಮ ಭಾಷೆಯಾಗಬೇಕೆಂದು ನಾನು ಎಲ್ಲಿಯೂ ಪ್ರತಿಪಾದಿಸಿಲ್ಲ ಎಂದಿರುವ ದೊಡ್ಡರಂಗೇಗೌಡ, 'ಎಲ್ಲ ಕಡೆ ಆಂಗ್ಲ ಭಾಷೆ ಆಕ್ರಮಿಸಿಕೊಳ್ಳುತ್ತಿದೆ. ಕನ್ನಡವು ಇಂಗ್ಲಿಷ್‌ಗೆ ಪರ್ಯಾಯ ಸಂಸ್ಕೃತಿ ಆಗಬೇಕು. ಇಲ್ಲದೇ ಹೋದರೆ ಸಂಸ್ಕೃತಿ ಎಂಬುದು ವಿಕೃತಿ ಆಗುತ್ತೆ' ಎಂದು ಹೇಳಿದರು.

'ನಾನೂ ಸಹ ಕನ್ನಡ ಹೋರಾಟಗಾರನೇ. ಗೋಕಾಕ್‌ ಚಳುವಳಿಯಲ್ಲಿ ನಾನೂ ಭಾಗವಹಿಸಿದ್ದೇನೆ. ಸಾಹಿತಿಗಳು, ಸಂಸ್ಕೃತಿಯ ವಕ್ತಾರರು, ಸಾಪ್ಟ್‌ವೇರ್‌ ಎಂಜನಿಯರ್‌ಗಳು ಕನ್ನಡವನ್ನು ಬೆಳೆಸಲು ಪ್ರಯತ್ನಿಸಬೇಕು' ಎಂದು ಅವರು ಹೇಳಿದ್ದಾರೆ.

'ಪುಸ್ತಕ ಓದುವ ಸಂಸ್ಕೃತಿ ಮರೆಯಾಗಿ, ಕೇಳುವ ಸಂಸ್ಕೃತಿ ಬೆಳೀತಾ ಇದೆ. ಯೂಟ್ಯೂಬ್‌ನಲ್ಲಿ ನೋಡುವ ಸಂಸ್ಕೃತಿ ಹೆಚ್ಚುತ್ತಿದೆ' ಎಂದು ದೊಡ್ಡರಂಗೇಗೌಡ ಆತಂಕ ವ್ಯಕ್ತಪಡಿಸಿದರು.

'ನಮಗೊಂದು ಪೂರ್ವ ಪರಂಪರೆ ಇದೆ. ಗುರು ಪರಂಪರೆ ಇದೆ. ಹಿನ್ನೆಲೆಯ ಬೆಳಕಿದೆ. ಆ ಹಾದಿಯಲ್ಲಿ ನಾವು ನಡೆದಿದ್ರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಅಭಿಪ್ರಾಯವಾಗಿದೆ. ಇಂತಹ ಖಚಿತವಾದ ಅಭಿಪ್ರಾಯ ವ್ಯಕ್ತಪಡಿಸಿದಾಗ ವಿರೋಧಿ ಅಲೆ ಏಳುತ್ತದೆ. ಅದನ್ನು ನಾನು ಎದುರಿಸಿದ್ದೇನೆ. ಪರಂಪರೆಯ ಬೇರುಗಳಲ್ಲಿ ನಮಗೆ ಆಸಕ್ತಿ ಇದ್ದಾಗ, ಕನ್ನಡದ ಬೇರುಗಳಲ್ಲಿಯೂ ನಾವು ಆಸಕ್ತಿ ಹೊಂದಬೇಕಾಗುತ್ತದೆ' ಎಂದು ಅವರು ಹೇಳಿದರು.

'ಮಕ್ಕಳು ಕನ್ನಡದಲ್ಲೇ ಕಲಿತರೆ ಹೆಚ್ಚಿನ ಜ್ಞಾನ ಲಭಿಸುತ್ತದೆ. ಕನ್ನಡಕ್ಕೊಂದು ಸೊಗಡಿದೆ. ಈ ಸೊಗಡನ್ನು ತಂಪಾಗಿ, ಇಂಪಾಗಿ ಮಾಡಬೇಕಿದೆ. ಮಕ್ಕಳಿಗೆ ಕನ್ನಡದ ಪಠ್ಯಕ್ರಮ ಬೇಕಿದೆ. ಮೂಲ ಸಂಸ್ಕೃತಿಯ ಕಡೆಗೆ ಕಣ್ಣು ಹಾಯಿಸೋಣ. ಬೇರೆ ದೇಶಗಳಿಗೆ ಹೋಗಿ ಉದ್ದಾರ ಮಾಡುವ ನಾವು, ಈ ನೆಲದ ಕಡೆಗೆ ನೋಡಬೇಕಿದೆ' ಎಂದು ದೊಡ್ಡರಂಗೇಗೌಡ ಹೇಳಿದರು.

'ಇಷ್ಟೊಂದು ಭವ್ಯ ಪರಂಪರೆ ಹೊಂದಿರುವ ನಾವು, ಯಾಕೆ ಇಂಗ್ಲಿಷ್‌ಗೆ ಜೋತು ಬೀಳಬೇಕು. ನಾವು ಕನ್ನಡಿಗರು ಎನ್ನಲು ಧೈರ್ಯಬೇಕು. ಭವ್ಯ ಕನ್ನಡದ ಸಂಸ್ಕೃತಿ ಇರುವಾಗ, ಒಗ್ಗದ ಆಂಗ್ಲ ಸಂಸ್ಕಾರ ನಮಗೇಕೆ? ನಾನು ಕನ್ನಡದ ಕಿಂಕರನಾಗಿ ಕೊನೆಯುಸಿರವರೆಗೂ ಉಳಿಯುವೆ' ಎಂದು ದೊಡ್ಡರಂಗೇಗೌಡ ಕೊನೆಯಲ್ಲಿ ಗದ್ಗದಿತರಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.