ADVERTISEMENT

ಅತ್ಯಾಚಾರ ಪ್ರಕರಣ: ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:32 IST
Last Updated 24 ಜೂನ್ 2025, 16:32 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಬೆಂಗಳೂರು: ‘ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣದ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮಂದಗತಿಯಲ್ಲಿದ್ದು, ಆರೋಪಿ ಪ್ರಜ್ವಲ್‌ ರೇವಣ್ಣ ಅವರಿಗೆ ಜಾಮೀನು ನೀಡಬೇಕು’ ಎಂದು ಅವರ ಪರ ಹಿರಿಯ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು.

ಈ ಸಂಬಂಧ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಜ್ವಲ್‌ ಪರ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಪ್ರಕರಣದ ವಿಚಾರಣೆ ಒಂದಿಂಚೂ ಪ್ರಗತಿ ಕಂಡಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಇದೇ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಸಮನ್ವಯ ಪೀಠ ವಜಾಗೊಳಿಸಿದೆ. ಆದರೆ, ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಎಚ್.‌ಡಿ.ರೇವಣ್ಣ ವಿರುದ್ಧದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠಕ್ಕೆ ವಿವರಿಸಿದರು.

ಸರ್ಕಾರದ ಪರ ಹಾಜರಿದ್ದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಮತ್ತು ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್, ‘ಅರ್ಜಿದಾರರ ವಿರುದ್ಧ ಒಟ್ಟು 5 ಪ್ರಕರಣ ದಾಖಲಾಗಿವೆ. ಇವುಗಳಲ್ಲಿ ಒಟ್ಟು 156 ಸಾಕ್ಷಿಗಳಿದ್ದು, ಈಗಾಗಲೇ 30 ಸಾಕ್ಷಿಗಳ ವಿಚಾರಣೆ ನಡೆದಿದೆ. ಒಂದು ಕೇಸಿನಲ್ಲಿನ ಸಾಕ್ಷ್ಯ ವಿಚಾರಣೆ ಅಂತಿಮ ಹಂತದಲ್ಲಿದೆ. ಇನ್ನೆರಡು ಪ್ರಕರಣಗಳ ವಿಚಾರಣೆಯೂ ಆರಂಭವಾಗಿದೆ. ಒಂದು ವೇಳೆ ಜಾಮೀನು ನೀಡಿದರೆ ಅರ್ಜಿದಾರರು ಮತ್ತವರ ಕಟುಂಬದ ಸದಸ್ಯರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ’ ಎಂದು ಆಕ್ಷೇಪಿಸಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.