ಹೈಕೋರ್ಟ್
ಬೆಂಗಳೂರು: ‘ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಮಾನ ಹಾನಿಯಾಗುವಂತಹ ಹೇಳಿಕೆ ನೀಡಿದ್ದಾರೆ’ ಎಂಬ ಆರೋಪದಡಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಈ ಸಂಬಂಧ, ‘ಆಲ್ ಇಂಡಿಯಾ ದಲಿತ್ ಆ್ಯಕ್ಷನ್ ಕಮಿಟಿ’ ರಾಷ್ಟ್ರೀಯ ಅಧ್ಯಕ್ಷ ಚಿ.ನಾ.ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್ ಈ ಪಿಐಎಲ್ ಸಲ್ಲಿಸಿದ್ದು ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಅರ್ಜಿಯಲ್ಲಿ ರಾಹುಲ್ ಗಾಂಧಿ, ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗ, ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ.
‘ದ್ವೇಷ ಭಾಷಣದ ಮೂಲಕ ಮಹಿಳೆಯರ ಘನತೆಗೆ ಚ್ಯುತಿ ಉಂಟು ಮಾಡಿರುವ, ಭಾರತೀಯ ಮಹಿಳೆಯರಿಗೆ ಅಗೌರವ ತೋರಿರುವ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗ, ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.