ADVERTISEMENT

ಪ್ರೀತಂಗೌಡ ರಕ್ಷಣೆಗೆ ಸ್ಪೀಕರ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 20:45 IST
Last Updated 14 ಫೆಬ್ರುವರಿ 2019, 20:45 IST
ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ನಿಯೋಗ ಪ್ರೀತಂಗೌಡ ಅವರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರು ಸಲ್ಲಿಸಿತು
ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ನಿಯೋಗ ಪ್ರೀತಂಗೌಡ ಅವರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರು ಸಲ್ಲಿಸಿತು   

ಬೆಂಗಳೂರು: ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಹಾಗೂ ಅವರ ಕುಟುಂಬದವರಿಗೆ ಎಲ್ಲ ರೀತಿಯ ರಕ್ಷಣೆ ಕೊಡಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಅವರು ಸರ್ಕಾರಕ್ಕೆ ನಿರ್ದೇಶನ ನೀಡಿದರು.

ಗುರುವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ‘ಗೂಂಡಾಗಿರಿ ಸರ್ಕಾರ, ಶಾಸಕರ ಮೇಲೆ ಹಲ್ಲೆ ನಡೆಸಿದ ಸರ್ಕಾರ, ವಿರೋಧ ಪಕ್ಷದ ನಾಯಕರ ಫೋನ್ ಕದ್ದು ಕೇಳುವ ಕಳ್ಳಗಿವಿಯ ಸರ್ಕಾರ’ ಎಂದೆಲ್ಲ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ‘ನಮ್ಮ 20 ಶಾಸಕರ ಜತೆಗೂಡಿ ಹಾಸನಕ್ಕೆ ಹೋಗಿ ಬಂದಿದ್ದೇನೆ. ಪ್ರೀತಂಗೌಡ ಅವರ ಮನೆಯ ಮೇಲೆ ದಾಳಿ ನಡೆಸಿದ ಜೆಡಿಎಸ್ ಕಾರ್ಯಕರ್ತರು ಅವರನ್ನು ಉಳಿಯಲಿಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅವರ ಮನೆ ಮೇಲೆ ಕಲ್ಲುತೂರಾಟ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. 300–400 ಜನರು ಗೂಂಡಾಗಿರಿ ನಡೆಸಲು ಬಂದಿದ್ದರು. ಆಗ ಅಲ್ಲಿ 3–4 ಪೊಲೀಸರು ಮಾತ್ರ ಇದ್ದರು’ ಎಂದು ಕಿಡಿಕಾರಿದರು.

ADVERTISEMENT

ಆಗ ಆಡಳಿತ ಪಕ್ಷದ ಶಾಸಕರು, ‘ಬುರುಡೇ ಬುರುಡೆ’ ಎಂದು ಘೋಷಣೆ ಕೂಗಿದರಲ್ಲದೇ, ಯಡಿಯೂರಪ್ಪ ಹೇಳುತ್ತಿರುವುದೆಲ್ಲ ಸುಳ್ಳು. ಇದು ಕೇವಲ ರಾಜಕೀಯ ಎಂದು ಹೇಳಿದರು.

‘ಆಯ್ತು ಕುಳಿತುಕೊಳ್ಳಿ’ ಎಂದು ಗದರಿಸಿದ ಸಭಾಧ್ಯಕ್ಷರು, ‘ಈ ಸದನದ ಸದಸ್ಯರಾದ ಪ್ರೀತಂಗೌಡರ ಜೀವಕ್ಕೆ ಅಪಾಯ ಇದೆ. ಸದನ ನಡೆಯುತ್ತಿರುವ ವೇಳೆ ಇದು ಪ್ರಸ್ತಾಪವಾಗಿದ್ದು, ಅವರ ರಕ್ಷಣೆ ಕೊಡುವುದು ನನ್ನ ಕರ್ತವ್ಯ. ಅವರ ಜೀವಕ್ಕೆ, ಕುಟುಂಬಕ್ಕೆ, ಮನೆಗೆ ಸೂಕ್ತ ರಕ್ಷಣೆ ನೀಡಬೇಕು. ಶಾಸಕರು ಕರ್ತವ್ಯ ನಿರ್ವಹಿಸಲು ಅನುವಾಗುವಂತೆ ಅವರಿಗೆ ಪೊಲೀಸ್‌ ಭದ್ರತೆ ಒದಗಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡುತ್ತೇನೆ’ ಎಂದು ಹೇಳಿದರು.

ರಾಜ್ಯಪಾಲರಿಗೆ ಬಿಜೆಪಿ ಮನವಿ

ಪ್ರೀತಂಗೌಡ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನಿಯೋಗ ಗುರುವಾರ ಮನವಿ ಸಲ್ಲಿಸಿದೆ. ರಾಜ್ಯ ಸರ್ಕಾರದಿಂದ ವರದಿಪಡೆದು ತನಿಖೆಗೆ ಆದೇಶಿಸಬೇಕು ಎಂದೂ ಒತ್ತಾಯಿಸಿದೆ.

ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರ ಗೂಂಡಾಗಿರಿ ನಡೆಸುತ್ತಿದೆ ಎಂದು ಶಾಸಕರು ಘೋಷಣೆಗಳನ್ನು ಕೂಗಿದರು.

ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಜೆಡಿಎಸ್‌ ಕಾರ್ಯಕರ್ತರು ಪ್ರೀತಂಗೌಡ ಮನೆಗೆ ನುಗ್ಗಿ ತಂದೆ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರೆ. ಮಗನನ್ನು ಮುಗಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ’ ಎಂದು ದೂರಿದರು.

‘ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಮ್ಮ ಪಕ್ಷದ ಹಲವು ಶಾಸಕರು ಇಂತಹ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ಪರಮೇಶ್ವರ ಕಾಲೆಳೆದ ಬಿಜೆಪಿ

ದೇವೇಗೌಡರ ಕುರಿತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಹಿಂದೆ ಮಾತುಗಳನ್ನು ಉಲ್ಲೇಖಿಸಿರುವ ಬಿಜೆಪಿ ಅವರ ಕಾಲೆಳೆದಿದೆ.

ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ತಮ್ಮ ಪಕ್ಷ ಅಧಿಕಾರಕ್ಕೆ ಬರದಿದ್ದರೆ ವಿಷ ಕುಡಿದು ಸಾಯುವೆ ಎಂದು ದೇವೇಗೌಡರು ಹೇಳಿದ್ದರು. ಅವರು ಸಾಯುವುದು ಯಾವಾಗ ಎಂದು ಕಾಯುತ್ತಲೇ ಇದ್ದೇವೆ’ ಎಂದು ಪರಮೇಶ್ವರ ಹೇಳಿದ್ದರು. ಆಗ ಗೌಡರ ಕುಟುಂಬಕ್ಕೆ ನೋವಾಗಿರಲಿಲ್ಲವೇ’ ಎಂದು ಕುಟುಕಿದ್ದಾರೆ.

ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಪರಮೇಶ್ವರ, ‘ಸ್ಕಿಲ್ ಡೆವಲಪ್ ಮಾಡುತ್ತೇವೆಂದು ಹೇಳಿದ ಬಿಜೆಪಿಯು ಹಳೇ ವಿಡಿಯೋಗಳನ್ನು ತಿರುಚುವ ಸ್ಕಿಲ್ ಡೆವಲಪ್‌ ಮಾಡಿದೆ. ಚುನಾವಣಾ ಸಮಯದಲ್ಲಿ ಆಡಿದ ಮಾತನ್ನು ಲೇವಡಿ ಮಾಡುವುದಕ್ಕೂ ಸಾವು ಬಯಸುವುದಕ್ಕೂ ವ್ಯತ್ಯಾಸವಿಲ್ಲವೇ’ ಎಂದಿದ್ದಾರೆ.

ರಾಜ್ಯಪಾಲರಿಗೆ ಡಿಜಿಪಿ ಮಾಹಿತಿ

ಪ್ರೀತಂಗೌಡ ಮನೆ ಮೇಲಿನ ದಾಳಿ ಪ್ರಕರಣದ ಕುರಿತು ರಾಜ್ಯ ಡಿಜಿಪಿ ನೀಲಮಣಿರಾಜು ಅವರು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ನೀಲಮಣಿ ಅವರು, ಗುರುವಾರ ಹಾಸನದಲ್ಲಿ ನಡೆದ ಘಟನೆ, ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.