ADVERTISEMENT

ಅನರ್ಹ ಶಾಸಕರಿಗೆ ಬೆಂಬಲವೋ, ಪಾಠವೋ?

ಮತ ಎಣಿಕೆಗೆ ಸಿದ್ಧತೆ: ಮಧ್ಯಾಹ್ನದ ವೇಳೆಗೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 12:33 IST
Last Updated 8 ಡಿಸೆಂಬರ್ 2019, 12:33 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಮತ ಎಣಿಕೆ ಪೂರ್ವಸಿದ್ಧತೆ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ಮತ ಎಣಿಕೆ ಪೂರ್ವಸಿದ್ಧತೆ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿದರು   

ಬೆಳಗಾವಿ: ಅತ್ಯಂತ ಕುತೂಹಲ ಮೂಡಿಸಿರುವ ಜಿಲ್ಲೆಯ ಗೋಕಾಕ, ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ‍ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮತ ಎಣಿಕೆಯುಸೋಮವಾರ (ಡಿ.9) ಬೆಳಿಗ್ಗೆ 8ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆ ಇದೆ. ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ನಡೆಯುವ ಪ್ರಕ್ರಿಯೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಹೋದರರ ಸವಾಲ್‌ನಿಂದಾಗಿ ಗೋಕಾಕ ಕಣ ಗಮನಸೆಳೆದಿದೆ. ಅಲ್ಲಿ ಬಿಜೆಪಿಯ ರಮೇಶ ಜಾರಕಿಹೊಳಿ, ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ, ಜೆಡಿಎಸ್‌ನ ಅಶೋಕ ಪೂಜಾರಿ ಸೇರಿದಂತೆ 11 ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ. ಸಹೋದರರಲ್ಲಿ ಯಾರು ಪ್ರಬಲ, ಇವರಿಬ್ಬರ ಜಗಳದಲ್ಲಿ 3ನೇಯವರಿಗೆ ಲಾಭವಾಗುವುದೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

ADVERTISEMENT

ಅಥಣಿಯಲ್ಲಿ ಬಿಜೆಪಿಯ ಮಹೇಶ ಕುಮಠಳ್ಳಿ, ಕಾಂಗ್ರೆಸ್‌ನ ಗಜಾನನ ಮಂಗಸೂಳಿ, ಕೆಜೆಪಿಯ ವಿನಾಯಕ ಮಠಪತಿ ಸೇರಿದಂತೆ 8 ಮಂದಿ ಹಾಗೂ ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ, ಕಾಂಗ್ರೆಸ್‌ನ ಭರಮಗೌಡ (ರಾಜು) ಕಾಗೆ ಹಾಗೂ ಜೆಡಿಎಸ್‌ನ ಶ್ರೀಶೈಲ ತುಗಶೆಟ್ಟಿ ಸೇರಿದಂತೆ 9 ಅಭ್ಯರ್ಥಿಗಳಲ್ಲಿ ನೂತನ ಶಾಸಕರು ಯಾರು ಎನ್ನುವುದು ಪ್ರಕಟಗೊಳ್ಳಲಿದೆ. ಮತದಾರ ಪ್ರಭುಗಳು ಯಾರಿಗೆ ‘ಮತ ದಾನ’ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿದೆ.

2018ರ ಮೇನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದವರು, ರಾಜೀನಾಮೆ ನೀಡಿದ್ದರಿಂದ ನಡೆದ ಈ ಉಪ ಸಮರ ನಡೆದಿದೆ. ಅವರು ಮತ್ತೆ ಜನಾಶೀರ್ವಾದ ಬಯಸಿದ್ದಾರೆ. ಡಿ.5ರಂದು ನಡೆದಿರುವ ಚುನಾವಣೆಯಲ್ಲಿ ಮತದಾರರರು ಅನರ್ಹ ಶಾಸಕರಿಗೆ ಮಣೆ ಹಾಕಿದ್ದಾರೆಯೇ ಅಥವಾ ಬುದ್ಧಿ ಕಲಿಸಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಜಿಲ್ಲೆಯ ಜನರಲ್ಲಿದೆ. ಹೀಗಾಗಿ, ಕ್ಷೇತ್ರದಲ್ಲಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬೆಟ್ಟಿಂಗ್‌ ಭರಾಟೆಯೂ ಜೋರಾಗಿದೆ ಎನ್ನಲಾಗುತ್ತಿದೆ.

ಸಿದ್ಧತೆ ಪೂರ್ಣ:‘ಜಿಲ್ಲೆಯ ಮೂರು ಮತ ಕ್ಷೇತ್ರಗಳ ಮತ ಎಣಿಕೆ ಇಲ್ಲಿನ ಆರ್.ಪಿ.ಡಿ. ಕಾಲೇಜಿನಲ್ಲಿ ಸೋಮವಾರ (ಡಿ.9) ನಡೆಯಲಿದೆ. ಭದ್ರತೆ ಸೇರಿದಂತೆ ಮತ ಎಣಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಭಾನುವಾರ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ‘ಭದ್ರತೆ, ಪಾರ್ಕಿಂಗ್, ಮತ ಎಣಿಕೆ ಸಿಬ್ಬಂದಿ ಗುರುತಿ ನಚೀಟಿ, ಅಂತರ್ಜಾಲ ಸಂಪರ್ಕ, ಅಗತ್ಯ ಉಪಕರಣಗಳನ್ನು ಒದಗಿಸುವುದು, ಅಂಚೆ ಮತ ಎಣಿಕೆ, ಚುನಾವಣಾ ವೀಕ್ಷಕರ ಕೊಠಡಿ, ಮಾಹಿತಿ ಕೇಂದ್ರ, ಊಟೋಪಹಾರ ವ್ಯವಸ್ಥೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು. ತುರ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಅಂಬ್ಯುಲೆನ್ಸ್ ಸೌಲಭ್ಯ, ಅಗ್ನಿಶಾಮಕ ದಳ ನಿಯೋಜನೆ ಖಚಿತಪಡಿಸುವಂತೆ ಸೂಚಿಸಿದರು.

‘‌ಸಾರ್ವಜನಿಕರಿಗೆ ಮತ ಎಣಿಕೆ ಮಾಹಿತಿಯನ್ನು ನೀಡಲು ಆರ್.ಪಿ.ಡಿ. ಮುಖ್ಯದ್ವಾರ ಅಥವಾ ಕ್ರಾಸ್ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಬೇಕು’ ಎಂದು ತಿಳಿಸಿದರು.

ಪ್ರತಿ ಕ್ಷೇತ್ರಕ್ಕೆ 14 ಟೇಬಲ್ ವ್ಯವಸ್ಥೆ:‘ಪ್ರತಿ ಮತಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಆಯಾ ಮತಕ್ಷೇತ್ರಗಳ ಮತಗಟ್ಟೆ ಸಂಖ್ಯೆ ಆಧಾರದಲ್ಲಿ ಗರಿಷ್ಠ 21 ಸುತ್ತಿನಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಚುನಾವಣಾ ಆಯೋಗದ ಅನುಮತಿ ನಂತರವೇ ಫಲಿತಾಂಶ ಘೋಷಿಸಲಾಗುವುದು. ಬೆಳಿಗ್ಗೆ 8ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಏಜೆಂಟರನ್ನು ನಿಯೋಜಿಸಿದ್ದಾರೆ.
ಮತ ಎಣಿಕೆ ಕುರಿತು ಚುನಾವಣಾಧಿಕಾರಿ ನೀಡುವ ವಿವರರವನ್ನು ಆಯಾ ಕ್ಷೇತ್ರದ ಸಾಮಾನ್ಯ ವೀಕ್ಷಕರು ದೃಢೀಕರಿಸಿದ ಬಳಿಕ ಪ್ರತಿ ಸುತ್ತಿನ ಎಣಿಕೆ ವಿವರವನ್ನು ಪ್ರಕಟಿಸಲಾಗುತ್ತದೆ’ ಎಂದರು.

ಮೊಬೈಲ್ ಫೋನ್ ನಿಷೇಧ:‘ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಯಾರೂ ಮೊಬೈಲ್ ಫೋನ್‌ಗಳನ್ನು ತರಬಾರದು’ ಎಂದು ಕೋರಿದರು.

ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ‘ಕೇಂದ್ರಕ್ಕೆ 3 ಹಂತದ ಭದ್ರತೆ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 750 ಜನರನ್ನು ನಿಯೋಜಿಸಲಾಗಿದೆ. ತಾಲ್ಲೂಕಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ವೀಕ್ಷಕರು ಹಾಗೂ ನಾಲ್ವರು ಹಿರಿಯ ಅಧಿಕಾರಿಗಳ ವಾಹನಗಳಿಗೆ ಮಾತ್ರ ಕೇಂದ್ರದ ಆವರಣದಲ್ಲಿ ಪ್ರವೇಶವಿರುತ್ತದೆ. ಉಳಿದ ವಾಹನಗಳನ್ನು ಮೈದಾನದಲ್ಲಿ ನಿಗದಿತ ಸ್ಥಳದಲ್ಲಿ ನಿಲ್ಲಿಸಬೇಕು’ ಎಂದು ತಿಳಿಸಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿಗಳಾದ ಸೀಮಾ ಲಾಟ್ಕರ್, ಯಶೋದಾ ಒಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌ಕುಮಾರ್, ಗೋಕಾಕ ಚುನಾವಣಾಧಿಕಾರಿ ಟಿ. ಭೂಬಾಲನ್, ಅಥಣಿಯ ಜಿಲಾನಿ ಮೊಖಾಶಿ, ಕಾಗವಾಡದ ಗೋಪಾಲಕೃಷ್ಣ ಸಣ್ಣತಂಗಿ, ಎನ್.ಐ.ಸಿ. ಅಧಿಕಾರಿ ಸಂಜೀವ ಕ್ಷೀರಸಾಗರ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.