ADVERTISEMENT

ಮುಂಗಾರು ಮಳೆ: ಸಿದ್ಧತೆಗೆ ಸೂಚನೆ

‌ಅಗತ್ಯ ಸಲಕರಣೆಗಳ ಪಟ್ಟಿ ನೀಡಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಆದೇಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 14:12 IST
Last Updated 26 ಫೆಬ್ರುವರಿ 2020, 14:12 IST
ಅನೀಸ್‌ ಕಣ್ಮಣಿ ಜಾಯ್‌
ಅನೀಸ್‌ ಕಣ್ಮಣಿ ಜಾಯ್‌   

ಮಡಿಕೇರಿ: ಮುಂಗಾರು ಅವಧಿಯಲ್ಲಿ ಸಂಭವಿಸಬಹುದಾದ ವಿಪತ್ತನ್ನು ಎದುರಿಸಲು ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಗ್ನಿಶಾಮಕ, ಗೃಹರಕ್ಷಕ ದಳ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳು ತಮಗೆ ಬೇಕಿರುವ ಸಲಕರಣೆಗಳಿಗೆ ಸಂಬಂಧಿಸಿದಂತೆ ಮಾಹಿತಿಯ ಪಟ್ಟಿ ಒದಗಿಸಬೇಕು. ಮುಂಗಾರು ಅವಧಿಯಲ್ಲಿ ಪ್ರಕೃತಿ ವಿಕೋಪ ಎದುರಿಸುವಲ್ಲಿ ಅಗತ್ಯ ಸಲಕರಣೆಗಳಾದ ಬೋಟ್‌ಗಳು, ಔಟ್ ಬೋರ್ಡ್ ಮೋಟಾರು (ಒಬಿಎಂ), ಹಗ್ಗ, ಗರಗಸ ಮತ್ತಿತರ ವಸ್ತುಗಳನ್ನು ಖರೀದಿ ಮಾಡಬೇಕಿರುವುದರಿಂದ ಮುಂಚಿತವಾಗಿ ಟೆಂಡರ್ ಆಹ್ವಾನಿಸಬೇಕಿದೆ. ಆದ್ದರಿಂದ, ಈ ಬಗ್ಗೆ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

‘2018ರ ಮುಂಗಾರು ಅವಧಿಯಲ್ಲಿ ಜಿಲ್ಲೆಯ ಉತ್ತರ ಭಾಗದಲ್ಲಿ ಪ್ರಕೃತಿ ವಿಕೋಪ ಉಂಟಾಯಿತು. ಇದನ್ನು ಗಮನಿಸಿ 2019ರಲ್ಲಿ ಜಿಲ್ಲೆಯ ಉತ್ತರ ಭಾಗಕ್ಕೆ ಒತ್ತು ನೀಡಲಾಗಿತ್ತು. ಆದರೆ, 2019ರಲ್ಲಿ ಕೊಡಗಿನ ದಕ್ಷಿಣ ಭಾಗದಲ್ಲಿ ಪ್ರಕೃತಿ ವಿಕೋಪ ಸಂಭವಿಸಿತ್ತು. ಆದ್ದರಿಂದ ಈ ಬಾರಿ ಜಿಲ್ಲೆಯ ಎಲ್ಲಾ ಭಾಗಗಳ ಬಗ್ಗೆ ಗಮನಹರಿಸಬೇಕಿದ್ದು, ಆ ನಿಟ್ಟಿನಲ್ಲಿ ಹೋಬಳಿ ಕೇಂದ್ರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಳೆದ ವರ್ಷದ ಪ್ರಕೃತಿ ವಿಕೋಪದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಸಂಬಂಧ ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ನಿರ್ದೇಶನ ನೀಡಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಸಂಬಂಧ ಕಾರ್ಯಾಗಾರ ಏರ್ಪಡಿಸುವಂತಾಗಬೇಕು ಎಂದು ಪಿ.ಚಂದನ್ ಸಲಹೆ ಮಾಡಿದರು.

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ, ‘ಕೂಡಿಗೆ ಬಳಿ ಗೋಶಾಲೆ ತೆರೆಯಲಾಗಿದ್ದು, ಈ ಜಾಗ ಅರಣ್ಯ ಇಲಾಖೆ ಹೆಸರಿನಲ್ಲಿದೆ. ಆದ್ದರಿಂದ ಈ ಜಾಗವನ್ನು ಪಶುಪಾಲನಾ ಇಲಾಖೆಗೆ ಕೊಡಿಸಿಕೊಡಿಸಬೇಕು’ ಎಂದು ಕೋರಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ವೈದ್ಯಾಧಿಕಾರಿಗಳ ನಿಯೋಜನೆ ಮತ್ತಿತರ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಭೂದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್.ಮಚ್ಚಾದೋ, ಪೌರಾಯುಕ್ತ ಎಂ.ಎಲ್.ರಮೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಲಿ, ಕೆಎಸ್‌ಆರ್‌ಟಿಸಿ ನಗರ ಘಟಕ ವ್ಯವಸ್ಥಾಪಕಿ ಗೀತಾ, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ರವಿಕುಮಾರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಧರ್, ತಾ.ಪಂ ಇಒಗಳಾದ ಸುನಿಲ್ ಕುಮಾರ್, ಷಣ್ಮುಗಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.