ADVERTISEMENT

ಉದ್ಯಮ ಶ್ರೇಯಾಂಕ ಕುಸಿತಕ್ಕೆ ಹಿಂದಿನ ಆಡಳಿತವೇ ಕಾರಣ: ಬಿ.ವೈ ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 18:33 IST
Last Updated 6 ಸೆಪ್ಟೆಂಬರ್ 2020, 18:33 IST
   

ಬೆಂಗಳೂರು: ‘2018-19ನೇ ಸಾಲಿನ ವರದಿ ಆಧಾರದ ಮೇಲೆ ಉದ್ಯಮಸ್ನೇಹಿ ರಾಜ್ಯಗಳ ಶ್ರೇಯಾಂಕದಲ್ಲಿ ಕರ್ನಾಟಕದ ಸ್ಥಾನ ಕುಗ್ಗಲು, ಹಿಂದೆ ಆಡಳಿತ ನಡೆಸಿದವರ ವೈಫಲ್ಯದ ಫಲ ಎಂಬುದನ್ನು ಅಂಕಿ-ಅಂಶಗಳೇ ಸಾಕ್ಷೀಕರಿಸುತ್ತಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ನೆರೆ, ಕೊರೊನಾ ಹಾವಳಿಗಳ ನಡುವೆಯೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಕಾಣಲು ಅವಕಾಶ ನೀಡಿಲ್ಲ’ ಎಂದಿದ್ದಾರೆ.

‘ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರ ಬದುಕೂ ಹಸನಾಗಬೇಕು, ರಾಜ್ಯಕ್ಕೆ ಸುಲಲಿತ ಬಂಡವಾಳವೂ ಹರಿದು ಬರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ರೈತ, ಉದ್ದಿಮೆ- ಸ್ನೇಹಿ ದಿಟ್ಟಹೆಜ್ಜೆ ಇರಿಸಿದೆ. 2008ರಲ್ಲಿ ಯಡಿಯೂರಪ್ಪ ಸರ್ಕಾರ ಉದ್ದಿಮೆ ವಹಿವಾಟಿನ ಪಟ್ಟಿಯಲ್ಲಿ ದೇಶದಲ್ಲೇ 2ನೇ ಸ್ಥಾನ ದಲ್ಲಿತ್ತು ಎಂಬುದನ್ನು ನೆನಪಿಸಬಯಸುವೆ’ ಎಂದೂ ಹೇಳಿದ್ದಾರೆ.

ADVERTISEMENT

‘ಎಷ್ಟೇ ಸಂಕಷ್ಟ, ಸವಾಲುಗಳಿದ್ದರೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವದ ಸದ್ದು ಮೊಳಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತಶೈಲಿ ಆ ವಿಶ್ವಾಸ ಮೂಡಿಸಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.