ADVERTISEMENT

PHC, CHC ಮೇಲ್ದರ್ಜೆಗೆ ಏರಿಸಲು ಆರೋಗ್ಯ ಇಲಾಖೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 14:25 IST
Last Updated 4 ಅಕ್ಟೋಬರ್ 2025, 14:25 IST
ದಿನೇಶ್ ಗುಂಡುರಾವ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ.
ದಿನೇಶ್ ಗುಂಡುರಾವ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ.   

ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು, ಹೊಸದಾಗಿ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ಜನಸಂಖ್ಯೆಯ ಜತೆಗೆ ಭೌಗೋಳಿಕ ಮಾನದಂಡದ ಅನ್ವಯ ಪರಿಶೀಲನೆ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಹಾಲಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಜತೆಗೆ, ಹೊಸ ಕೇಂದ್ರಗಳ ಪ್ರಾರಂಭಕ್ಕೆ ಅನೇಕ ಮನವಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಈ ಸಂಬಂಧ ಪರಿಶೀಲನೆ ಕೈಗೊಳ್ಳಲು ಜನಸಂಖ್ಯೆಯ ಮಾನದಂಡವನ್ನು ಮಾತ್ರ ಪರಿಗಣಿಸದೆ, ಭೌಗೋಳಿಕ ಮಾನದಂಡವನ್ನೂ ಪರಿಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ನಿಗದಿತ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ (ಪಿಎಚ್‌ಸಿ) 10-15 ಕಿ.ಮೀ. ಅಂತರದಲ್ಲಿ, 30 ನಿಮಿಷಗಳ ಪ್ರಯಾಣದ ಸಮಯದಲ್ಲಿ ಯಾವುದೇ ಪಿಎಚ್‌ಸಿ ಅಥವಾ ಉನ್ನತ ಮಟ್ಟದ ಆರೋಗ್ಯ ಸೌಲಭ್ಯ ಅಸ್ತಿತ್ವದಲ್ಲಿ ಇರಬಾರದು. ಅದೇ ರೀತಿ, ನಿಗದಿತ ಸಮುದಾಯ ಆರೋಗ್ಯ ಕೇಂದ್ರದಿಂದ (ಸಿಎಚ್‌ಸಿ) 30 ಕಿ.ಮೀ. ಅಂತರದಲ್ಲಿ ಅಥವಾ ಒಂದು ಗಂಟೆಯ ಪ್ರಯಾಣದ ಸಮಯದಲ್ಲಿ ಯಾವುದೇ ಸಿಎಚ್‌ಸಿ ಅಥವಾ ಉನ್ನತ ಮಟ್ಟದ ಆರೋಗ್ಯ ಸೌಲಭ್ಯ ಅಸ್ತಿತ್ವದಲ್ಲಿ ಇರಬಾರದು ಎಂದು ಸೂಚಿಸಲಾಗಿದೆ.

ADVERTISEMENT

ಈ ಮಾನದಂಡಗಳನ್ನು ಪೂರೈಸದ ಪ್ರಸ್ತಾವಗಳನ್ನು ಪರಿಗಣಿಸುವುದಿಲ್ಲ. ಅಷ್ಟಾಗಿಯೂ ಬೇಡಿಕೆ ಇದ್ದಲ್ಲಿ ನಿಗದಿತ ಮಾನದಂಡಗಳನ್ನು ಮೀರಿ, ಹೆಚ್ಚುವರಿ ವೈದ್ಯಾಧಿಕಾರಿಗಳನ್ನು ನೇಮಿಸುವ ಮೂಲಕ ಅಸ್ತಿತ್ವದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಕ್ರಮವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.