ADVERTISEMENT

ಒತ್ತಡದಿಂದ ಕೈಕಟ್ಟಿ ಕುಳಿತ ಸಿಐಡಿ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಮೇ 2022, 15:42 IST
Last Updated 7 ಮೇ 2022, 15:42 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ದಕ್ಷತೆಗೆ ಹೆಸರಾಗಿದ್ದ ಪೊಲೀಸ್ ವ್ಯವಸ್ಥೆ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಉಸ್ತುವಾರಿಯಲ್ಲಿ ಕಳಂಕ ಹೊತ್ತುಕೊಳ್ಳುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ಆಡಿಯೊ ಕ್ಲಿಪ್ ನೈಜತೆಯನ್ನು ದೃಢಪಡಿಸಿಕೊಳ್ಳಲಾಗದಷ್ಟು ಮಟ್ಟಿಗೆ ಸಿಐಡಿ ದುರ್ಬಲವಾಗಿದೆ ಎಂದು ಅನಿಸುವುದಿಲ್ಲ. ಸಚಿವರ ಒತ್ತಡದಿಂದ ಕೈಕಟ್ಟಿಕೊಂಡು, ಕುದುರೆ ಕಣ್ಣಿನಂತೆ ಹಗರಣವನ್ನು ನೋಡುತ್ತಿದೆ’ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಸಚಿವರನ್ನು ಉದ್ದೇಶಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್, ‘ಈಗಾಗಲೇ ನಡೆದಿರುವ ಪಿಎಸ್‍ಐನ 545 ಮತ್ತು ಮುಂದೆ ನಡೆಯಬೇಕಿರುವ 402 ಹುದ್ದೆಗಳ ಅಕ್ರಮಗಳಿಂದ ಕಂಗಾಲಾಗಿರುವ ನೀವು ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಪ್ರತಿಕ್ರಿಯಿಸುತ್ತಿದ್ದೀರಿ ಎನಿಸುತ್ತಿದೆ’ ಎಂದಿದ್ದಾರೆ.

‘ಸಣ್ಣಪುಟ್ಟ ಆರೋಪಿಗಳನ್ನು ಹಿಡಿದು ಜಂಬ ಕೊಚ್ಚಿಕೊಳ್ಳಬೇಡಿ. ಪಿಎಸ್‍ಐ ಹುದ್ದೆ ಕೊಡಿಸಲು ಸಂಗ್ರಹಿಸಲಾದ ಹಣ ಎಲ್ಲೆಲ್ಲಿ ಹೋಗಿದೆ? ಯಾರಿಗೆಲ್ಲಾ ಹಂಚಿಕೆಯಾಗಿದೆ ಎಂದು ಪತ್ತೆ ಹಚ್ಚಿ, ವಶ ಪಡಿಸಿಕೊಳ್ಳಲು ಶುರು ಮಾಡಿಸಿ ಸಾಕು. ನಿಮ್ಮ ಸರ್ಕಾರ ತನ್ನಷ್ಟಕ್ಕೆ ತಾನೇ ಪತನಗೊಳ್ಳುತ್ತದೆ ಎಂಬ ಮಾತುಗಳಿವೆ. ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿವ್ಯಾ ಹಾಗರಗಿ ಅವರ ಕಾರು, ಆಕೆ ತಲೆ ಮರೆಸಿಕೊಂಡ ಕಾಲಾವಧಿಯಲ್ಲಿ ಯಾರ ಊರಿನಲ್ಲಿ ನಿಂತಿತ್ತು ಎಂಬ ವದಂತಿಗಳು ಸಾರ್ವಜನಿಕವಾಗಿ ಹರಿದಾಡುತ್ತಿವೆ. ಜೆ.ಜೆ.ನಗರ ಕೊಲೆ ಪ್ರಕರಣದಲ್ಲಿ ವದಂತಿಗಳನ್ನೇ ನಂಬಿ ಹೇಳಿಕೆ ನೀಡಿ, ಕೆಲವೇ ಗಂಟೆಗಳಲ್ಲಿ ಕ್ಷಮೆಯಾಚಿಸಿದ ನಿಮಗೆ, ಪಿಎಸ್‍ಐ ಹಗರಣದಲ್ಲಿನ ವದಂತಿಗಳ ಬಗ್ಗೆ ಮಾಹಿತಿ ಇರುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ನಾನು ನಿಮ್ಮ ಸರ್ಕಾರದ ಬಿಟ್ ಕಾಯಿನ್ ಹಗರಣದಿಂದ ಈವರೆಗೂ ಮಾತು ಬದಲಿಸಿಲ್ಲ. ನನ್ನ ಮಾತುಗಳು ಸುಳ್ಳು ಎಂದು ಸಾಬೀತು ಪಡಿಸಲು ನಿಮ್ಮಿಂದ ಆಗಿಲ್ಲ. ಈಗಲೂ ನಿಮ್ಮ ಮುಂದೆ ನನ್ನ ಆರೋಪಗಳ ಸವಾಲಿದೆ. ಮೊದಲು ಅದಕ್ಕೆ ಉತ್ತರಿಸಿ’ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.