ADVERTISEMENT

ಪ್ರಜಾವಾಣಿ ವಿಶೇಷ | ಸಹ ಪ್ರಾಧ್ಯಾಪಕರಿಗೆ ದಕ್ಕದ ‘ಪ್ರೊಫೆಸರ್’ ಗಿರಿ

ಒಂದೇ ಬಡ್ತಿಗೆ ಎರಡು ಬಾರಿ ಸಂದರ್ಶನ l ಮೊದಲ ಅವಕಾಶಕ್ಕೂ ವಿಘ್ನ

ಚಂದ್ರಹಾಸ ಹಿರೇಮಳಲಿ
Published 15 ಡಿಸೆಂಬರ್ 2022, 1:07 IST
Last Updated 15 ಡಿಸೆಂಬರ್ 2022, 1:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಂದೇ ಬಡ್ತಿಗೆ ಎರಡು ಬಾರಿ ಸಂದರ್ಶನ ನಡೆಸಿದರೂ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹ ಪ್ರಾಧ್ಯಾಪಕರಿಗೆ ‘ಪ್ರೊಫೆಸರ್‌’ಗಳಾಗುವ (ಪ್ರಾಧ್ಯಾಪಕ) ಯೋಗ ಕೂಡಿಬಂದಿಲ್ಲ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳ ಅನ್ವಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಶೇ 10ರಷ್ಟು ಸಹ ಪ್ರಾಧ್ಯಾಪಕರನ್ನು ಪ್ರಾಧ್ಯಾಪಕರ ಹುದ್ದೆಗೆ ಪರಿಗಣಿಸಲು ಇದೇ ಮೊದಲ ಬಾರಿ ಸರ್ಕಾರ ಅವಕಾಶ ಕಲ್ಪಿಸಿತ್ತು.

2018ರಲ್ಲೇ ಬಡ್ತಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಅರ್ಹತೆ ಇರುವವರು ಪ್ರಾಂಶುಪಾಲರಿಂದ ದೃಢೀಕರಿಸಿದ ಪ್ರತಿಗಳನ್ನು ಇಲಾಖೆಗೆ ಸಲ್ಲಿಸಲು ಸೂಚಿಸಲಾಗಿತ್ತು. ದಾಖಲೆ ಸಲ್ಲಿಸಿದ ನಂತರ ಗೂಗಲ್‌ ಫಾರಂನಲ್ಲಿ ಆನ್‌ಲೈನ್‌ ಮೂಲಕ ಭರ್ತಿ ಮಾಡುವಂತೆ ಮರು ಆದೇಶ ಹೊರಡಿಸಲಾಗಿತ್ತು.

ADVERTISEMENT

ಎರಡು ಬಾರಿ ಸಂದರ್ಶನ: ಬಡ್ತಿ ನಿರೀಕ್ಷೆಯಲ್ಲಿದ್ದ ಸಹ ಪ್ರಾಧ್ಯಾ ಪಕರು ದಾಖಲೆಗಳ ಪರೀಶಿಲನೆಗಾಗಿ ವಿಷಯವಾರು ನಿಗದಿಪಡಿಸಿದ ದಿನಾಂಕ ಗಳಂದು ಬಂದು ಹೋಗಿದ್ದರು. ನಂತರ ದಾಖಲಾತಿ ಪರಿಶೀಲನೆಯಲ್ಲಿ ಅರ್ಹರಾದವರನ್ನು ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು. ಹಲವು ವಾರಗಳು ನಡೆದ ಸಂದರ್ಶನ ಪೂರ್ಣಗೊಂಡ ನಂತರ ಯಾವುದೇ ಕಾರಣಗಳನ್ನು ನೀಡದೆ ಉನ್ನತ ಶಿಕ್ಷಣ ಇಲಾಖೆ ಪ್ರಕ್ರಿಯೆಯನ್ನೇ ರದ್ದುಪಡಿಸಿತ್ತು. ಒತ್ತಡ ಹೆಚ್ಚಾದ ನಂತರ ಎರಡು ತಿಂಗಳ ಹಿಂದೆ ಮತ್ತೆ ಅದೇ ಸಹ ಪ್ರಾಧ್ಯಾಪಕರಿಗೆ 2ನೇ ಬಾರಿ ಸಂದರ್ಶನ ನಡೆಸಲಾಗಿತ್ತು. ಆದರೂ, ಬಡ್ತಿ ಆದೇಶ ಹೊರಬಿದ್ದಿಲ್ಲ ಎಂದು ಸಹ ಪ್ರಾಧ್ಯಾಪಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ನಿಗದಿಪಡಿಸಿದ ಎಲ್ಲ ದಾಖಲೆ ಗಳನ್ನು ಸಲ್ಲಿಸಿದ್ದೇವೆ. ಒಂದು ಬಾರಿ ದಾಖಲೆಗಳ ಪರಿಶೀಲನೆ, ಎರಡು ಬಾರಿ ಸಂದರ್ಶನಕ್ಕೆ ಹೋಗಿದ್ದೆವು. ಸಂದರ್ಶನಕ್ಕೆ ನಿಯೋಜಿಸಿದ್ದ ಸಂಪ ನ್ಮೂಲ ವ್ಯಕ್ತಿಗಳೇ ಸರಿ ಇಲ್ಲ ಎಂದು ಆಯುಕ್ತರ ಕಚೇರಿಯಿಂದ ಮೌಖಿಕ ಸೂಚನೆ ನೀಡಲಾಯಿತು. ಮತ್ತೆ ಎರಡನೇ ಬಾರಿ ಸಂದರ್ಶನ ಮುಗಿದು ಎರಡು ತಿಂಗಳಾದರೂ ಮಾಹಿತಿ ಇಲ್ಲ’ ಎಂದು ಸಹ ಪ್ರಾಧ್ಯಾಪಕರೊಬ್ಬರು ದೂರಿದರು.

ಲೇಖನ, ಐಎಸ್‌ಎಸ್‌ಎನ್‌ ನಂಬರ್‌ಗೂ ಹಣ

ಪ್ರಾಧ್ಯಾಪಕರಾಗಿ ಬಡ್ತಿ ಪಡೆಯಲು ನಿಗದಿ ಪಡಿಸಿರುವ ಅರ್ಹತೆಗಳಲ್ಲಿ ಪಿಎಚ್‌.ಡಿ ಪದವಿ ದಾಖಲೆಗಳು, ಯುಜಿಸಿಯಿಂದ ಅನುಮೋದಿತವಾದ ಪತ್ರಿಕೆಗಳಲ್ಲಿ ಪ್ರಕಟವಾದ ಐದು ಲೇಖನಗಳನ್ನುಐಎಸ್‌ಎಸ್‌ಎನ್‌ (ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್ ಸೀರಿಯಲ್‌ ನಂಬರ್) ಅಥವಾ ಐಎಸ್‌ಬಿಎನ್‌ ಸಂಖ್ಯೆ
(ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬುಕ್‌ ನಂಬರ್) ಸಹಿತ ಸಲ್ಲಿಸಬೇಕು.

ಬಹುತೇಕ ಸಹ ಪ್ರಾಧ್ಯಾಪಕರು ಹಣಕೊಟ್ಟು ತಮ್ಮ ಹೆಸರಿನಲ್ಲಿ ಲೇಖನ ಬರೆಸಿದ್ದಾರೆ. ಐಎಸ್‌ಎಸ್‌ಎನ್‌ ಸಂಖ್ಯೆ ಇರುವ ಪ್ರಮಾಣಪತ್ರ ಪಡೆದಿದ್ದಾರೆ. ಈ ರೀತಿ ಲೇಖನ ಬರೆಸಿಕೊಡುವ,ಐಎಸ್‌ಎಸ್‌ಎನ್‌ ಸಂಖ್ಯೆಯ ಪ್ರಮಾಣಪತ್ರ ಕೊಡಿಸುವ ದೊಡ್ಡ ಜಾಲವೇ ರಾಜ್ಯದಲ್ಲಿದೆ. ಕೆಲವು ಪ್ರಾಧ್ಯಾಪಕರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಲೇಖನ ಪ್ರಕಟಗೊಳ್ಳಲು ₹ 10 ಸಾವಿರದಂತೆ ಐದು ಲೇಖನಗಳಿಗೆ ₹ 50 ಸಾವಿರ ಪಡೆಯಲಾಗುತ್ತಿದೆ ಎಂಬ ಆಕ್ಷೇಪಗಳಿವೆ. ಈ ಕುರಿತು ಕೆಲ ಸಹಪ್ರಾಧ್ಯಾಪಕರು ಮಧ್ಯವರ್ತಿಗಳ ಜತೆ ಸಂಭಾಷಣೆ ನಡೆಸಿರುವ ಆಡಿಯೊ ಸಂಭಾಷಣೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

‘ಇದೇ ಮೊದಲ ಬಾರಿಗೆ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರಿಗೆ ಪ್ರೊಫೆಸರ್‌ಗಳಾಗುವ ಅವಕಾಶ ಸಿಕ್ಕಿದೆ. ಬಡ್ತಿಗಾಗಿ ಬಹುತೇಕ ಸಹೊದ್ಯೋಗಿಗಳು ಲಕ್ಷಗಟ್ಟಲೆ ಹಣಕೊಟ್ಟು ಪಿ.ಎಚ್‌ಡಿ ಪಡೆದಿದ್ದಾರೆ. ದಶಕಗಳಿಂದ ಒಂದು ಲೇಖನ ಬರೆಯಲು ಮನಸ್ಸು ಮಾಡದವರು ವಾಮಮಾರ್ಗದ ಮೂಲಕ ದಾಖಲೆ ಸಂಗ್ರಹಿಸಿದ್ದಾರೆ. ಶ್ರಮ ಪಡದೆ ಎಲ್ಲವನ್ನೂ ಪಡೆಯಲು ಬಯಸುತ್ತಾರೆ. ಮಧ್ಯವರ್ತಿಗಳಿಗೆ ಒಂದು ವರ್ಷದಿಂದ ಸಾಕಷ್ಟು ಹಣ ನೀಡಿದ್ದಾರೆ’ ಎನ್ನುತ್ತಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜೊಂದರ ಹೆಸರು ಹೇಳಲು ಇಚ್ಛಿಸದ ಸಹ ಪ್ರಾಧ್ಯಾಪಕ.

ತಾಂತ್ರಿಕ ಕಾರಣಗಳಿಂದ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಲು ಎರಡನೇ ಬಾರಿ ಸಂದರ್ಶನ ನಡೆಸಲಾಗಿದೆ. ಬಡ್ತಿ ಪಟ್ಟಿ ಶೀಘ್ರ ಪ್ರಕಟಿಸಲಾಗುವುದು.

- ಪಿ.ಪ್ರದೀಪ್‌ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.