ವಿಧಾನಸಭೆ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಪರಿಶಿಷ್ಟ ಜಾತಿ–ಪಂಗಡ, ಹಿಂದುಳಿದವರು ಹಾಗೂ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ₹2 ಕೋಟಿ ವೆಚ್ಚದ ಕಾಮಗಾರಿಗಳು, ₹1 ಕೋಟಿವರೆಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ 2025 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಮುಖ್ಯಮಂತ್ರಿಯವರ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರು ಮಸೂದೆಯನ್ನು ಮಂಡಿಸಿದರು.
ಗ್ರಾಮೀಣ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿಗೆ ಎಲ್ಲ ಆಸ್ತಿಗಳನ್ನು ತಂದು ಆರ್ಥಿಕ ಸಂಪನ್ಮೂಲ ಸಂಗ್ರಹ ಜಾಲಕ್ಕೆ ಒಳಪಡಿಸುವ ಉದ್ದೇಶದ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2025’ ಅನ್ನು ಮಂಡಿಸಲಾಯಿತು.
ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಇರುವ ಕಟ್ಟಡ ನಿವೇಶನಗಳಿಗೆ ಹೊಸಖಾತಾ ಅಥವಾ ಪಿಐಡಿ ನೀಡಲು ಗ್ರಾಮಪಂಚಾಯಿತಿ ಅಥವಾ ಪ್ರಾಧಿಕಾರಗಳು ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನ್‌ಗಾಗಿ ಅನುಮೋದನೆ ಪಡೆದುಕೊಳ್ಳಬೇಕು. ಅಲ್ಲದೇ, ಅನಧಿಕೃತ ವಸತಿ ಪ್ರದೇಶದಲ್ಲಿರುವ ಆವರಣಗಳು ಮತ್ತು ಕಟ್ಟಡಗಳಿಗೆ ಸ್ವತ್ತು ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಭೂ ಕಬಳಿಕೆ ಕೃತ್ಯಗಳ ವಿಚಾರಣೆ ತ್ವರಿತವಾಗಿ ನಡೆಸಿ ಇತ್ಯರ್ಥಗೊಳಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸುವುದು, ಸರ್ಕಾರಿ ಭೂಮಿ ರಕ್ಷಿಸುವುದು ಮತ್ತು ಕಂದಾಯ ಅಧಿಕಾರಿಗಳು ಭೂಕಬಳಿಕೆ ತಡೆಯುವ ಪ್ರಾಥಮಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದಂತೆ ಹೊಣೆಗಾರಿಕೆಯನ್ನು ನಿಗದಿಪಡಿಸಲು ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು.
ಒತ್ತುವರಿ ಪ್ರಕರಣಗಳ ಅಂತರವನ್ನು ವೈಮಾನಿಕವಾಗಿಯೇ ಲೆಕ್ಕ ಹಾಕಬೇಕು. ಭೂಕಬಳಿಕೆ ದಂಡ ಪ್ರಮಾಣವನ್ನು ₹25 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ.
ದಾಖಲೆಗಳನ್ನು ಫೋರ್ಜರಿ ಮಾಡಿ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡುವುದನ್ನು ತಡೆಯಲು ಕರ್ನಾಟಕ ಭೂಕಂದಾಯ(ತಿದ್ದುಪಡಿ)ಮಸೂದೆಯನ್ನು ಮಂಡಿಸಲಾಯಿತು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಆರಂಭಿಸಲು ಅವಕಾಶ ಕಲ್ಪಿಸುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ– 2025 ಅನ್ನು ಮಂಡಿಸಲಾಯಿತು.
ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಗಳ ವ್ಯಾಪ್ತಿಯಿಂದ ಈ ಐದು ಜಿಲ್ಲೆಗಳನ್ನು ಬೇರ್ಪಡಿಸಿ ಹೊಸ ವಿಶ್ವ ವಿದ್ಯಾಲಯ ಆರಂಭಿಸುವ ಪ್ರಸ್ತಾವ ಮಸೂದೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.