ADVERTISEMENT

ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳಿಗೆ ಬಡ್ತಿ ವಂಚನೆ?

ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 18:50 IST
Last Updated 24 ಏಪ್ರಿಲ್ 2022, 18:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ‘ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಒಟ್ಟು 846 ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ಗಳ ಸೇವೆ ಮತ್ತು ಜ್ಯೇಷ್ಠತೆಯನ್ನು 2003–2004 ರಿಂದಲೇ ಪರಿಗಣಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಪದೋ
ನ್ನತಿಗೆ ಪರಿಗಣಿಸದೆ ವಂಚಿಸಲಾಗಿದೆ’ ಎಂದು ಎಂಜಿನಿಯರ್‌ಗಳು ಆರೋಪಿಸಿದ್ದಾರೆ. ಈ ಸಂಬಂಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ನಮಗೆ ಆಗಿರುವ ಅನ್ಯಾಯದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ.ಎಸ್‌. ಕೃಷ್ಣಾರೆಡ್ಡಿ, ಜಂಟಿ ಕಾರ್ಯದರ್ಶಿ ಸಿ.ಎಚ್‌. ಹನುಮಂತಯ್ಯ ಮತ್ತು ಅಧೀನ ಕಾರ್ಯದರ್ಶಿ ಐ.ಎಸ್‌. ರುದ್ರಯ್ಯ, ಸಲಹೆಗಾರರಾಗಿರುವ ನಿವೃತ್ತ ಅಧೀನ ಕಾರ್ಯದರ್ಶಿ ಸುರೇಂದ್ರ ಭಾಗಿಯಾಗಿದ್ದಾರೆ. ಈ ಅಧಿಕಾರಿಗಳು ಜಾತಿ ಕಾರಣದಿಂದ ವ್ಯವಸ್ಥಿತವಾಗಿ ಪಿತೂರಿ ಮಾಡಿ ಸಾಮಾಜಿಕ ಸ್ಥಾನಮಾನ ಸಿಗದಂತೆ ಹಾಗೂ ಆರ್ಥಿಕವಾಗಿ
ನಷ್ಟ ಉಂಟು ಮಾಡಲು ಸಂಚು ಮಾಡಿದ್ದಾರೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಡಿ. ಮೂರ್ತಿ, ವಾಸುದೇವ್‌ ಬಿ.ಎಚ್‌, ಜಿ. ಲೋಕೇಶ್‌ ಮತ್ತಿತರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ: 2003–04ರಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಹಾಯಕ ಎಂಜಿನಿಯರ್‌ಗಳನ್ನು 2005 ರಲ್ಲಿ ಕಾಯಂ ಹುದ್ದೆಗಳಿಗೆ ವಿಲೀನಗೊಳಿಸಲಾಗಿತ್ತು. 2014 ರಲ್ಲಿ ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ. ಬಳಿಕ ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪಿನಂತೆ ಕೆಪಿಎಸ್‌ಸಿ ಮೂಲಕ ಮತ್ತೆ ಅರ್ಹತೆ ಪರಿಶೀಲಿಸಿ ಈ ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳ ಸೇವೆ ಮತ್ತು ಜ್ಯೇಷ್ಠತೆಯನ್ನು 2003–04 ರಿಂದ ನಿಗದಿಪಡಿಸಿ 2017ರಲ್ಲಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ.‘ಆದರೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಪದೋನ್ನತಿ ನೀಡಲು 1978ರ ಬಡ್ತಿ ಮೀಸಲಾತಿ ನಿಯಮ ಪಾಲಿಸಿಲ್ಲ. 2006–07ರಿಂದಲೇ ಎಲ್ಲರೂ ಬಡ್ತಿಗೆ ಅರ್ಹರಿದ್ದೇವೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನಾನಾ ಕಾರಣಗಳನ್ನು ನೀಡಿ ಪದೋನ್ನತಿಗೆ ಪರಿಗಣಿಸಿಲ್ಲ. ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ 2017ರ ಜ್ಯೇಷ್ಠತಾ ಸಂರಕ್ಷಣೆ ಕಾಯ್ದೆ ಹಾಗೂ 2019 ರ ಮೇ 10 ರಂದು ಸುಪ್ರೀಂಕೋರ್ಟ್‌ ತೀರ್ಪಿನಂತೆ ತತ್ಪರಿಣಾಮದ ಜ್ಯೇಷ್ಠತೆ ಹಾಗೂ ಮೀಸಲಾತಿ ನೀಡದೆ ವಂಚಿಸಲಾಗಿದೆ’ ಎಂದು ಈ ಎಂಜಿನಿಯರ್‌ಗಳು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಲೋಕೋಪಯೋಗಿ ಇಲಾಖೆ 2022ರ ಜ. 31ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳ ಜ್ಯೇಷ್ಠತೆಯನ್ನು 2019ರ ನ. 8ಕ್ಕೆ ನಿಗದಿಪಡಿಸಲಾಗಿದೆ. ಆದರೆ, 1978ರ ಬಡ್ತಿ ನಿಯಮ ಪಾಲಿಸಿಲ್ಲ. ಹೀಗಾಗಿ, ಕಾರ್ಯಪಾಲಕ ಎಂಜಿನಿಯರ್‌ 719 ಹುದ್ದೆಗಳಿಗೆ ಪದೋನ್ನತಿಗೆ ಸಿದ್ಧಪಡಿಸಿದ ಅಧಿಕಾರಿಗಳ ಪಟ್ಟಿಯಲ್ಲಿ ಕೇವಲ ಮೂರು ಎಸ್‌ಸಿ, ಎಸ್‌ಟಿ ಅಧಿಕಾರಿಗಳ ಹೆಸರು ಮಾತ್ರ. ಈ ಬಗ್ಗೆ ಎಸ್‌ಸಿ, ಎಸ್‌ಟಿ ನೌಕರರ ಸಂಘ ಮತ್ತು ವೈಯಕ್ತಿಕವಾಗಿ ಆಕ್ಷೇಪಣೆ ಸಲ್ಲಿಸಿದರೂ ಯಾವುದೇ ಬದಲಾವಣೆ ಮಾಡಿಲ್ಲ. ‌ಆ ಮೂಲಕ ವಂಚನೆ ಮಾಡಲಾಗಿದೆ’ ಎಂದೂ ದೂರಿನಲ್ಲಿ ಎಂಜಿನಿಯರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.