ADVERTISEMENT

ನಾಲ್ಕು ಸ್ಮಾರ್ಟ್ ಸಿಟಿಗಳಿಗೆ ಪ್ರಸ್ತಾವ: ಸಚಿವ ಭೈರತಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 10:18 IST
Last Updated 15 ಜೂನ್ 2020, 10:18 IST
ಕಲಬುರ್ಗಿ ಮಹಾನಗರ ಪಾಲಿಕೆಯ ಟೌನ್‌ಹಾಲ್‌ನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ‌ಮಾತನಾಡಿದರು. ಶಾಸಕ ದತ್ತಾತ್ರೇಯ ‌ಪಾಟೀಲ ರೇವೂರ ಇದ್ದರು
ಕಲಬುರ್ಗಿ ಮಹಾನಗರ ಪಾಲಿಕೆಯ ಟೌನ್‌ಹಾಲ್‌ನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ‌ಮಾತನಾಡಿದರು. ಶಾಸಕ ದತ್ತಾತ್ರೇಯ ‌ಪಾಟೀಲ ರೇವೂರ ಇದ್ದರು   

ಕಲಬುರ್ಗಿ: ರಾಜ್ಯದಲ್ಲಿರುವ 11 ಮಹಾನಗರ ಪಾಲಿಕೆಗಳ ಪೈಕಿ ಈಗಾಗಲೇ 7 ಮಹಾನಗರ ಪಾಲಿಕೆಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದ ನಾಲ್ಕು ಪಾಲಿಕೆ ವ್ಯಾಪ್ತಿಯ ಪ್ರದೇಶಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ‌ಸಚಿವ ಭೈರತಿ ಬಸವರಾಜ್ ‌ಹೇಳಿದರು.

ನಗರದಲ್ಲಿ ಸೋಮವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿ, ವಿಜಯಪುರ, ಬಳ್ಳಾರಿ ‌ಹಾಗೂ ಮೈಸೂರು ‌ಜಿಲ್ಲೆಗಳನ್ನು ಸ್ಮಾರ್ಟ್ ‌ಸಿಟಿಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಮನವಿ‌ ಸಲ್ಲಿಸಲಾಗುವುದು. ಇದರಿಂದ ‌ಪ್ರತಿಯೊಂದು ಮಹಾನಗರ ಪಾಲಿಕೆಗೆ ತಲಾ ₹ 1 ಸಾವಿರ ಲಭಿಸಲಿದೆ. ಇದರಿಂದ ಹೆಚ್ಚು ಅಭಿವೃದ್ಧಿ ‌ಕಾರ್ಯ ಕೈಗೊಳ್ಳಬಹುದು ‌ಎಂದು ಹೇಳಿದರು.

ಆಸ್ತಿ ತೆರಿಗೆ ವಿನಾಯಿತಿ ಇಲ್ಲ: ಮಹಾನಗರ ‌ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಕೊರೊನಾ ಇರುವುದರಿಂದ ತೆರಿಗೆ ಪಾವತಿಗೆ ಮೂರು ತಿಂಗಳ ಕಾಲಾವಧಿ ನೀಡಲಾಗಿದೆ. ಅಗತ್ಯ ಬಿದ್ದರೆ ಇನ್ನೂ ‌ಎರಡು ತಿಂಗಳು ವಿಸ್ತರಿಸಲಾಗುವುದು. ಆಸ್ತಿ ತೆರಿಗೆಯೇ ಪಾಲಿಕೆಗಳಿಗೆ ವರಮಾನದ ಮೂಲವಾಗಿರುವುದರಿಂದ ಆಸ್ತಿ ತೆರಿಗೆ ದರ ಪರಿಷ್ಕರಣೆಯನ್ನು ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ದಶಕಗಳ ಹಿಂದೆ ಕಲಬುರ್ಗಿ ನಗರಕ್ಕೆ ‌ನೀರು ಪೂರೈಕೆ ಮಾಡುತ್ತಿದ್ದ ಬೋಸಗಾ ಕೆರೆಯ ಹೂಳೆತ್ತಲು ಹಾಗೂ ಸೌಂದರೀಕರಣ ಮಾಡಲು ಡಿಪಿಆರ್ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಕೊರೊನಾ ತಡೆಯಲು ಸಾವಿರ ಜನಸಂಖ್ಯೆಗೆ ಒಂದು ‌ಟಾಸ್ಕ್ ಫೋರ್ಸ್ ರಚಿಸದಿರುವುದಕ್ಕೆ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರನ್ನು ‌ತರಾಟೆಗೆ ತೆಗೆದುಕೊಂಡರು. ಎರಡು ದಿನಗಳಲ್ಲಿ ಟಾಸ್ಕ್ ಫೋರ್ಸ್ ರಚಿಸುವಂತೆ ತಾಕೀತು ಮಾಡಿದರು.

24x7 ಕುಡಿಯುವ ನೀರಿಗೆ ₹ 848 ಕೋಟಿ: ಕಲಬುರ್ಗಿಯ 55 ವಾರ್ಡ್ ಗಳಲ್ಲಿ ನಿರಂತರ ‌ಕುಡಿಯುವ ನೀರಿಗೆ ₹ 838 ಕೋಟಿ ಸಾಲವನ್ನು ವಿಶ್ವಬ್ಯಾಂಕ್ ನಿಂದ ಸಾಲ ಮಂಜೂರಾಗಿದೆ. ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.

ಶಾಸಕರಾದ ದತ್ತಾತ್ರೇಯ ‌ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ‌ಮತ್ತಿಮೂಡ, ಜಿಲ್ಲಾಧಿಕಾರಿ ‌ಶರತ್ ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.