ADVERTISEMENT

ಪ್ರಧಾನಿ ಅವಹೇಳನ: ಬಂಧನಕ್ಕೆ 24 ಗಂಟೆ ಗಡುವು

ಮಡಿಕೇರಿ, ವಿರಾಜಪೇಟೆಯಲ್ಲಿ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 16:13 IST
Last Updated 14 ನವೆಂಬರ್ 2018, 16:13 IST

ಮಡಿಕೇರಿ: ಕೊಡವ ಸಮಾಜ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವ ಇಬ್ಬರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಬುಧವಾರ ಪ್ರತಿಭಟನೆಗಳು ನಡೆದವು.

ಬಜರಂಗದಳ, ಬಿಜೆಪಿ, ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧವೂ ಪ್ರತಿಭಟನಾಕಾರರು ಘೋಷಣೆ ಕೂಗಿದರು.

‘ಹಿಂದೂ ಸಂಘಟನೆಯ ಮುಖಂಡರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಪತ್ರಕರ್ತ ಸಂತೋಷ್ ತಮ್ಮಯ್ಯ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿತ್ತು. ಭಯೋತ್ಪಾದಕನಂತೆ ರಾತ್ರೋರಾತ್ರಿ ಬಂಧಿಸಿರುವುದು ಖಂಡನೀಯ. ಟಿಪ್ಪು ಜಯಂತಿ ವಿರೋಧಿಸಿದರೆ ರಾಜ್ಯದಲ್ಲಿ ಉಳಿಗಾಲವೇ ಇಲ್ಲ’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್‌ ದೇವಯ್ಯ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿರುವ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ವ್ಯಕ್ತಿಯನ್ನೂ ಬಂಧಿಸಬೇಕು. 24 ಗಂಟೆಯ ಒಳಗೆ ಬಂಧಿಸದಿದ್ದರೆ ಕೊಡಗಿನಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ’ ಎಂದೂ ಎಚ್ಚರಿಸಿದರು.

ಪತ್ರಕರ್ತನ ಬಂಧನ ಖಂಡಿಸಿ ಬುಧವಾರ 1 ಗಂಟೆ ‘ಕೊಡಗು ಬಂದ್‌’ಗೆ ಕರೆ ನೀಡಲಾಗಿತ್ತು. ಆದರೆ, ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜನಜೀವನ ಸಹಜವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.