ADVERTISEMENT

ಮಡಿಕೇರಿ: ಪೌರತ್ವ ಕಾಯ್ದೆ ವಿರುದ್ಧ ಹೋರಾಟ

ಕೊಡಗು ಜಿಲ್ಲಾ ಮುಸ್ಲಿಂ ಜಮಾತ್‍ ಒಕ್ಕೂಟದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 12:55 IST
Last Updated 25 ಜನವರಿ 2020, 12:55 IST
ಮಡಿಕೇರಿ ಗಾಂಧಿ ಮೈದಾನದಲ್ಲಿ ಶನಿವಾರ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್‍ಗಳ ಒಕ್ಕೂಟದ ವತಿಯಿಂದ ಧರಣಿ ಸತ್ಯಾಗ್ರಹ ನಡೆಯಿತು
ಮಡಿಕೇರಿ ಗಾಂಧಿ ಮೈದಾನದಲ್ಲಿ ಶನಿವಾರ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್‍ಗಳ ಒಕ್ಕೂಟದ ವತಿಯಿಂದ ಧರಣಿ ಸತ್ಯಾಗ್ರಹ ನಡೆಯಿತು   

ಮಡಿಕೇರಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿ.ಎ.ಎ) ಮತ್ತು ಪೌರತ್ವ ನೋಂದಣಿ (ಎನ್‍ಆರ್‌ಸಿ) ವಿರೋಧಿಸಿ, ಕೊಡಗು ಜಿಲ್ಲಾ ಮುಸ್ಲಿಂ ಜಮಾತ್‍ಗಳ ಒಕ್ಕೂಟದ ವತಿಯಿಂದ ಶನಿವಾರ ನಗರದ ಗಾಂಧಿ ಮೈದಾನದಲ್ಲಿ ಧರಣಿ ನಡೆಯಿತು.

ಪ್ರತಿಭಟನಕಾರರು ಗಾಂಧಿ ಪ್ರತಿಮೆ ಎದುರು ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ಅಧ್ಯಕ್ಷ ಕೆ.ಎಂ.ಇಬ್ರಾಹಿಂ ಮಾತನಾಡಿ, ‘ಕೇಂದ್ರ ಸರ್ಕಾರದಿಂದ ಈಗಾಗಲೇ ತಿದ್ದುಪಡಿ ಆಗಿರುವ ಪೌರತ್ವ ಕಾಯ್ದೆ ವಾಪಸ್‌ ಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ. ಬದಲಾದ ಈ ಕಾಯ್ದೆಗಳು ದೇಶದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿವೆ. ಅಲ್ಪಸಂಖ್ಯಾತರನ್ನು ಕಡೆಗಣಿಸಿ, ರೂಪಿಸಿರುವ ಕಾನೂನನ್ನು ಪುನರ್‌ ಪರಿಶೀಲಿಸಬೇಕಿದೆ. ಜಾತ್ಯತೀತ ಮನೋಭಾವನೆ ಹೊಂದಿರುವ ಪ್ರತಿಯೊಬ್ಬರು ನಮ್ಮ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ADVERTISEMENT

ಒಕ್ಕೂಟದ ಉಪಾಧ್ಯಕ್ಷ ಪಿ.ಎಂ.ಖಾಸಿಂ ಮಾತನಾಡಿ, ‘ಬಿಜೆಪಿ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ದೇಶದಲ್ಲಿ ಅಳವಡಿಸಲು ಮುಂದಾಗಿದೆ. ಇದರಿಂದ ಮುಸ್ಲಿಂ ಬಾಂಧವರಿಗೆ ಆತಂಕ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರೂ ನಾಶಪಡಿಸಲು ಹೊರಟ್ಟಿದ್ದಾರೆ. ಧರ್ಮದ ಹೆಸರಲ್ಲಿ ದೇಶವನ್ನು ವಿಭಜನೆ ಮಾಡುತ್ತಿದ್ದಾರೆ. ಇದರಿಂದ ಕೋಮು ಗಲಭೆ ಸೃಷ್ಟಿಯಾಗಿದ್ದು, ಇದನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಖಂಡಿಸಬೇಕಾಗಿದೆ’ ಎಂದು ಆಗ್ರಹಿಸಿದರು.

‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪ್ರಕರಣದಲ್ಲಿ ಆದಿತ್ಯ ರಾವ್‍ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಲು ಬಿಜೆಪಿ ಮುಂದಾಗಿದೆ. ಇದರ ಸತ್ಯಾಸತ್ಯತೆ ಬಗ್ಗೆ ಜನರಿಗೆ ಪೊಲೀಸ್‌ ಇಲಾಖೆ ತಿಳಿಸಬೇಕಿದೆ. ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳೇ ಕೂಡಿಕೊಂಡು ಜಾತಿ ಜಾತಿಗಳ ನಡುವೆ ಸಂಘರ್ಷ ಏರ್ಪಡಲು ಕಾರಣರಾಗುತ್ತಿದ್ದಾರೆ. ಈ ಪ್ರಕಣದ ಹಿಂದೆ ಕಾಣದ ಕೈಗಳಿದ್ದು, ಉನ್ನತಮಟ್ಟದ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ಸರ್ಕಾರ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಮನುಷ್ಯ ಮನುಷ್ಯನನ್ನೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಸುಭದ್ರ ದೇಶವನ್ನು ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ದೇಶದ ನಾಗರಿಕರು ಪ್ರಬುದ್ಧತೆಯಿಂದ, ಶಾಂತಿಯುತವಾಗಿ ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಂದಿ ಹೋಗುವುದಿಲ್ಲ. ಸರ್ಕಾರ ಬಹಳ ಬೇಗ ಜಾಗೃತರಾಗಬೇಕು ಎಂದು ಕೋರಿದರು.

ಜಿಲ್ಲಾ ಬಹುಜನ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿ, ‘ದೇಶದ ಶಾಂತಿ ಸುವ್ಯವಸ್ಥೆಗೆ ಕಾಪಾಡಬೇಕಾದ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎನ್‌ಆರ್‌ಸಿ, ಸಿ.ಎ.ಎ ಕಾಯ್ದೆ ಜಾರಿಗೆ ತಂದು ದೇಶದ ಜನರ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿರುವುದು ಖಂಡನೀಯ. ಭಾರತೀಯರಿಗೆ ಈ ಕಾಯ್ದೆಯ ಅವಶ್ಯಕತೆ ಇಲ್ಲ. ಈ ಕಾಯ್ದೆಗಳು ರಾಷ್ಟ್ರದ ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದ್ದು ಈ ಕಾಯ್ದೆಯನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಸದಸ್ಯರಾದ ಮುಸ್ತಫ, ಬಾಪು, ಅಬ್ದುಲ್ ಅಡ್ಕರ್, ಮನ್ಸೂರ್ ಆಲಿ, ಹಂಸ ಕೊಟ್ಟಮುಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.