ADVERTISEMENT

ಪಿಟಿಸಿಎಲ್‌: ಮುಖ್ಯಮಂತ್ರಿ ಮನೆ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:41 IST
Last Updated 30 ಜೂನ್ 2022, 16:41 IST

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಭೂ ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಸಂತ್ರಸ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

‘ಭೂಮಿ ವಂಚಿತರು ಈ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಕಾಲಮಿತಿ ಇರಬಾರದು ಎಂಬ ಅಂಶವನ್ನು ಸೇರಿಸಿ ತಿದ್ದುಪಡಿ ಮಾಡಬೇಕು’ ಎಂದು ಸಮಿತಿ ಕಾರ್ಯಾಧ್ಯಕ್ಷ ಹರಿರಾಮ್‌ ಹೇಳಿದರು.

ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮುಖಂಡರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದರು. ‘ಈ ವಿಷಯ ನನ್ನ ಗಮನದಲ್ಲಿದೆ. ಕಂದಾಯ ಸಚಿವ ಆರ್.ಅಶೋಕ್‌ ಅವರೊಂದಿಗೆ ಚರ್ಚಿಸಿ ಕಾಯ್ದೆ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ADVERTISEMENT

ಬಳಿಕ ಆರ್‌.ಅಶೋಕ್ ಅವರ ಕಚೇರಿಗೆ ತೆರಳಿದ ಪ್ರತಿಭಟನಕಾರರು ಪ್ರತಿಭಟನೆಗೆ ಮುಂದಾದರು. ಸಚಿವರು ಬರುವ ತನಕ ಇಲ್ಲಿಯೇ ಕೂರುವುದಾಗಿ ಪಟ್ಟು ಹಿಡಿದರು. ‘ನಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿ ಕಾಯ್ದೆಗೆ ತಿದ್ದುಪಡಿ ತರುವ ಭರವಸೆಯನ್ನು ಆರ್.ಅಶೋಕ್ ನೀಡಿದ್ದಾರೆ. ತಿದ್ದುಪಡಿ ಮಾಡದಿದ್ದರೆ ಹೋರಾಟ ಅನಿವಾರ್ಯವಾಗಲಿದೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಮಿತಿಯ ಮಂಜುನಾಥ್ ಎಂ.ಎಚ್. ಈಶ್ವರ್, ಮುನಿನಂಜಪ್ಪ, ಶಾಂತಕುಮಾರ್, ಮುನಿರಾಜು, ರಮೇಶ್ ಆದಿಜಾಂಬವ, ಈರೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.