ADVERTISEMENT

ಶಾಸಕ ನೇತೃತ್ವದಲ್ಲಿ ಪ್ರತಿಭಟನೆ: ವಿರೋಧ

ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 20:15 IST
Last Updated 10 ಏಪ್ರಿಲ್ 2020, 20:15 IST
ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯಲ್ಲಿ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು
ಜಮಖಂಡಿ ತಾಲ್ಲೂಕಿನ ಹಿಪ್ಪರಗಿಯಲ್ಲಿ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು   

ಬಾಗಲಕೋಟೆ: ಹಿಪ್ಪರಗಿ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ರೈತರೊಂದಿಗೆ ಸೇರಿಕೊಂಡು ಶುಕ್ರವಾರ ಹಿಪ್ಪರಗಿ ಗ್ರಾಮದಲ್ಲಿ ಆರಂಭಿಸಿರುವ ಪ್ರತಿಭಟನೆಗೆ ಸ್ಥಳೀಯರು ವಿರೋಧ
ವ್ಯಕ್ತಪಡಿಸಿದ್ದಾರೆ.

ನದಿ ಪಾತ್ರದ ಹಳ್ಳಿಗಳ ನೂರಾರು ರೈತರು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರನ್ನು ಗುಂಪುಗೂಡಿಸಿ ಪ್ರತಿಭಟನೆ ನಡೆಸುವುದು ಸಲ್ಲ. ಬೇಕಿದ್ದರೆ ಬೇರೆ ಕಡೆ ಪ್ರತಿಭಟಿಸಿ ಎಂದು ಗ್ರಾಮಸ್ಥರುಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಜಮಖಂಡಿ ಡಿವೈಎಸ್ಪಿ ಆರ್.ಕೆ.ಪಾಟೀಲ ಅವರಿಗೆ ದೂರು ನೀಡಿದ್ದಾರೆ.

ADVERTISEMENT

ನೀರು ಬಿಟ್ಟರಷ್ಟೇ ಪ್ರತಿಭಟನೆ ಹಿಂದಕ್ಕೆ: ‘ಹಿಪ್ಪರಗಿ ಜಲಾಶಯದಿಂದ ನದಿಗೆ 0.3 ಟಿಎಂಸಿ ಅಡಿ ನೀರು ಹರಿಸುವಂತೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಗುರುವಾರ ಮಧ್ಯಾಹ್ನ ಆದೇಶ ಹೊರಡಿಸಿದ್ದಾರೆ. ಆದರೆ ಅದು ಈವರೆಗೆ ಪಾಲನೆಯಾಗಿಲ್ಲ’ ಎಂದು ಶಾಸಕ ಆನಂದ ನ್ಯಾಮಗೌಡ ಆರೋಪಿಸಿದರು.

‘ನೀರು ಹರಿಸುವಂತೆ ಹೇಳಲುಕರೆ ಮಾಡಿದರೆ ಜಮಖಂಡಿ ಉಪವಿಭಾಗಾಧಿಕಾರಿ ಮೊಬೈಲ್ ಪೋನ್ ಸ್ಚಿಚ್ಡ್‌ ಆಫ್ ಆಗಿದೆ. ತಹಶೀಲ್ದಾರ್ ಕೊರೊನಾ ಕರ್ತವ್ಯದ ಕಾರಣ ಬಿಡುವಿಲ್ಲ ಎನ್ನುತ್ತಾರೆ. ನಮ್ಮ ಮಾತಿಗೂ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ. ಶಾಂತಿಯುತ ಪ್ರತಿಭಟನೆ ಅನಿವಾರ್ಯ. ಇಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿದ್ದೇವೆ’ ಎಂದರು.

ಆದರೆ ಪ್ರತಿಭಟನೆ ಸ್ಥಳದಲ್ಲಿ ಗುಂಪು ಗೂಡಿದ್ದವರಲ್ಲಿ ಯಾವುದೇ ಸಾಮಾಜಿಕ ಅಂತರ ಪಾಲನೆ ಮಾಡಿದ್ದು ಕಂಡುಬರಲಿಲ್ಲ. ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದು ಜಲಾಶಯದಿಂದ ನದಿಗೆ ನೀರು ಹರಿಸುವ ತೀರ್ಮಾನ ಪ್ರಕಟಿಸಿದ ಮೇಲೆಯೇ ಸ್ಥಳದಿಂದ ತೆರಳುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

***

ನದಿಗೆ ನೀರು ಹರಿಸುವ ಅನಿವಾರ್ಯತೆ ಬಗ್ಗೆ ಜಮಖಂಡಿ ಉಪ ವಿಭಾಗಾಧಿಕಾರಿ ಅವರಿಂದ ವರದಿ ಕೇಳಿದ್ದು, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ

- ಮಹಾದೇವ ಮುರಗಿ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.